ಹನೂರಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆಯ ವಿಶೇಷ ಪೂಜೆ

| Published : Oct 02 2024, 01:15 AM IST

ಸಾರಾಂಶ

ಮಹಾಲಯ ಅಮಾವಾಸ್ಯೆ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಮಂಗಳವಾರ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಹನೂರು

ಮಹಾಲಯ ಅಮಾವಾಸ್ಯೆ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಮಂಗಳವಾರ ಪೂಜಾ ಕಾರ್ಯಕ್ರಮಗಳು ಜರುಗಿದವು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷವಾದ ವ್ಯವಸ್ಥೆ ಕಲ್ಪಿಸುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಭಕ್ತಾದಿಗ‍ಳಿಗೆ ಸೂಕ್ತ ಚಿಕಿತ್ಸೆ ಹಾಗೂ ತುರ್ತು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ನೆರಳಿನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಲ್ಪಿಸಲಾಗಿದೆ.

ವಿಶೇಷ ವಿದ್ಯುತ್ ದೀಪ ಅಲಂಕಾರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ದೇವಾಲಯ ಸೇರಿದಂತೆ ರಾಜಗೋಪುರ ಹಾಗೂ ಮುಖ್ಯ ದ್ವಾರ ಸೇರಿದಂತೆ ದೇವಾಲಯದ ಸುತ್ತಲೂ ಆಲಂಬಡಿ ಬಸವ ಮತ್ತು ದಾಸೋಹ ತೆರಳುವ ವಿವಿಧಡೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಭಕ್ತರಿಂದಲೂ ಸಹ ದೀಪಲಂಕಾರ ಸೇವೆಯ ಮೂಲಕ ಬರುವ ಭಕ್ತಾದಿಗಳಿಗೆ ವಿದ್ಯುತ್ ದೀಪಾಲಂಕಾರ ಜಗಮಗಿಸುವಂತೆ ಅಲಂಕಾರ ಮಾಡಲಾಗಿದೆ.

ದಾಸೋಹ ವ್ಯವಸ್ಥೆ ಪರಿಶೀಲಿಸಿದ ಕಾರ್ಯದರ್ಶಿ: ರಾಜ್ಯದ ಹಾಗೂ ವಿವಿಧ ಜಿಲ್ಲೆ ಸೇರಿದಂತೆ ತಮಿಳುನಾಡಿನಿಂದಲೂ ಬರುವ ಭಕ್ತಾದಿಗಳಿಗೆ ಉತ್ತಮ ಗುಣಮಟ್ಟದಿಂದ ಕೂಡಿರುವ ದಾಸೋಹ ವ್ಯವಸ್ಥೆ ಕಲ್ಪಿಸುವ ಮೂಲಕ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎಇ ಅವರು ದಾಸೋಹಕ್ಕೆ ತೆರಳಿ ಭಕ್ತರಿಗೆ ತಾವೇ ಸ್ವತಃ ಪ್ರಸಾದ ಬಡಿಸುವ ಮೂಲಕ ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸುವಂತೆ ಅಲ್ಲಿನ ವ್ಯವಸ್ಥಾಪಕ ಸ್ವಾಮಿಯವರಿಗೆ ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಹ ಅಪಾರ ಸಂಖ್ಯೆಯ ಭಕ್ತಾದಿಗಳು ಮಂಗಳವಾರ ಸರಥಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಜೊತೆಗೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ವಿಶೇಷ ವ್ಯವಸ್ಥೆಯ ಸರತಿ ಸಾಲು ಕಲ್ಪಿಸುವ ಮೂಲಕ ಹಿರಿಯ ನಾಗರಿಕರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಾದಪ್ಪನ ದರ್ಶನ ಭಾಗ್ಯ ಕಲ್ಪಿಸಿತು. ಮಹಾಲಯ ಅಮಾವಾಸ್ಯೆಗೆ ಭಕ್ತ ಸಾಗರವೇ ಹರಿದು ಬಂದಿತು.

ಬಿಗಿ ಪೊಲೀಸ್ ಬಂದೋಬಸ್ತ್: ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯ ಸೇರಿದಂತೆ ದಾಸೋಹ, ಬಸ್ ನಿಲ್ದಾಣ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ಪೊಲೀಸ ಇಲಾಖೆ ಕ್ರಮ ಕೈಗೊಂಡಿದೆ.