ಕೊನೆಯ ಶ್ರಾವಣ ಶನಿವಾರ ಪ್ರಯುಕ್ತ ಆಂಜನೇಯನಿಗೆ ವಿಶೇಷ ಪೂಜೆ

| Published : Sep 01 2024, 01:45 AM IST

ಸಾರಾಂಶ

ಬೆಂಗಳೂರು ಮುಖ್ಯರಸ್ತೆಯಲ್ಲಿ ನೆಲೆಸಿರುವ ಕೋಟೆ ವೀರಾಂಜನೇಯಸ್ವಾಮಿ ದೇವರ ಸನ್ನಿಧಾನದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರವನ್ನು ಏರ್ಪಡಿಸಲಾಗಿತ್ತು.

ಹಾರೋಹಳ್ಳಿ: ಕೊನೆಯ ಶ್ರಾವಣ ಶನಿವಾರವಾದ ಇಂದು ಇತಿಹಾಸ ಪ್ರಸಿದ್ಧ ಹಾರೋಹಳ್ಳಿಯ ಪಟ್ಟಣದ ಕೋಟೆ ವೀರಾಂಜನೇಯಸ್ವಾಮಿ ಹಾಗೂ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗದ ವೇಳೆ ಭಕ್ತರ ದಂಡು ಹರಿದುಬಂದಿತ್ತು.

ಬೆಂಗಳೂರು ಮುಖ್ಯರಸ್ತೆಯಲ್ಲಿ ನೆಲೆಸಿರುವ ಕೋಟೆ ವೀರಾಂಜನೇಯಸ್ವಾಮಿ ದೇವರ ಸನ್ನಿಧಾನದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರವನ್ನು ಏರ್ಪಡಿಸಲಾಗಿತ್ತು. ವಿಶೇಷ ಹೋಮ, ಹವನಗಳೊಂದಿಗೆ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯ ಆವರಣದಲ್ಲಿ ಶ್ರೀರಾಮ ಮಹಿಳಾ ಭಜನಾ ಮಂಡಳಿಯವರಿಂದ ಶ್ರೀರಾಮ ದೇವರ ಜಪ ಹಾಗು ಭಜನೆ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸೀತಾ- ರಾಮ ಹಾಗೂ ಲಕ್ಷ್ಮಣ ಸ್ವಾಮಿಗೆ ಚಿನ್ನಲೇಪಿತ ಬೆಳ್ಳಿ ಕವಚವನ್ನು ಸಮರ್ಪಿಸಲಾಯಿತು. ಪ್ರಧಾನ ಅರ್ಚಕ ಎಚ್.ಎಸ್.ರಾಘವೇಂದ್ರರ ನೇತೃತ್ವದಲ್ಲಿ ದೇವರಿಗೆ ನೆರವೇರಿಸಿದ್ದ ವಿಶೇಷ ಅಲಂಕಾರ ಭಕ್ತರ ಮನಸೂರೆಗೊಂಡಿತು.

ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ದೇವಾಲಯ ವತಿಯಿಂದ ಪ್ರತ್ಯೇಕವಾಗಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಶ್ರೀ ವೀರಾಂಜನೇಯ ಸೇವಾಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ದಾನಿಗಳಾದ ಕೋರಮಂಗಲ ಸಂತೋಷ್, ಜಗದೀಶ್ ಕುಟುಂಬಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಭಕ್ತರು ಭಾಗವಹಿಸಿದ್ದರು.