ಕನ್ನಡಪ್ರಭ ವಾರ್ತೆ ಮಳವಳ್ಳಿ
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಲಿ ಆಶಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಗಂಗಾಧಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ದೇವಸ್ಥಾನದ ಬಳಿ ಸೇರಿದ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಶಾಸಕರಿಗೆ ಸಚಿವ ಸ್ಥಾನ ಸಿಗಲಿ ಎಂದು ಶುಭ ಕೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ಸಂದರ್ಭದಲ್ಲಿ ಶಾಸಕರು ಪಕ್ಷ ಸಂಘಟಿಸಿ ಚುನಾವಣೆಯಲ್ಲಿ ಒಂದೊಂದರಂತೆ ಅಧಿಕಾರ ಹಿಡಿಯುವ ಮೂಲಕ ಬಲಿಷ್ಠಗೊಳಿಸಿದರು. ಜೊತೆಗೆ ಮೂರು ಭಾರಿ ಶಾಸಕರಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಮಾತನಾಡಿ, 2013ರಿಂದಲ್ಲೂ ನರೇಂದ್ರಸ್ವಾಮಿ ಅವರಿಗೆ ಸಚಿವರಾಗುವ ಅರ್ಹತೆ ಇತ್ತು. ಜಿಲ್ಲೆಗೂ ಅದು ಅನಿವಾರ್ಯತೆ ಇದೆ. ಡಿ.ಕೆ.ಶಿವಕುಮಾರ್ ಅವರ ಮಂತ್ರಿ ಮಂಡಲದಲ್ಲಿ ಅವಕಾಶ ಸಿಗಬೇಕು. ನಮ್ಮ ಹರಕೆ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ಈಡೇರುವ ನಂಬಿಕೆ ಇದೆ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು ಮಾತನಾಡಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಮಂತ್ರಿ ಮಂಡಲದಲ್ಲಿ ಅವಕಾಶ ಸಿಗುವಂತಾಗಲಿ ಎಂದು ಆಶಿಸಿದ್ದೇವೆ ಎಂದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಪಂ ಮಾಜಿ ಸದಸ್ಯೆ ಸುಷ್ಮಾ ರಾಜು, ಮುಖಂಡರಾದ ಡಿ.ಕೃಷ್ಣೇಗೌಡ, ಪುಟ್ಟಸ್ವಾಮಿ, ರಾಮಚಂದ್ರು, ದೊಡ್ಡಯ್ಯ, ಕುಳ್ಳಚನ್ನಂಕಯ್ಯ, ಮುಟ್ಟನಹಳ್ಳಿ ಅಂಬರೀಶ್, ಪಿ.ಮಾದೇಶ್, ಸಿ.ಮಾಧು ಚಂದ್ರು, ನೂರುಲ್ಲಾ, ದಿಲೀಪ್ ಕುಮಾರ್, ಸವಿತಾ, ಚಂದ್ರ ಕುಮಾರ್, ಪುಟ್ಟಸ್ವಾಮಿ, ಪೇಟೆಬೀದಿ ರವಿ, ಶಿವಕುಮಾರ್, ಕೃಷ್ಣ, ದೊಡ್ಡಸ್ವಾಮಿಗೌಡ, ನಾಗರಾಜು, ಎಂ.ಡಿ.ಸಂತೋಷ್ ಕುಮಾರ್, ಕಿರಣ್ ಶಂಕರ್ ಪಾಲ್ಗೊಂಡಿದ್ದರು.
ಕೆ.ಎಚ್ ಮುನಿಯಪ್ಪಗೆ ಡಿಸಿಎಂ, ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಸಚಿವ ಸ್ಥಾನ ನೀಡಿಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಂಭವನೀಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಂಪುಟದಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಡಿಸಿಎಂ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕು ಮಾದಿಗ ಸಮುದಾಯದ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ತಾಲೂಕು ಮಾದಾರ ಮಹಾ ಸಭಾದ ಅಧ್ಯಕ್ಷ ಅಲ್ಲಾಪಟ್ಟಣ ಕುಮಾರ್ ನೇತೃತ್ವದಲ್ಲಿ ಮಾದಿಗ ಸಮುದಾಯದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಎಚ್.ಮುನಿಯಪ್ಪ ನಮ್ಮ ಸಮುದಾಯದ ಮಹಾನ್ ನಾಯಕರು. 7 ಬಾರಿ ಶಾಸಕರು, ಎರಡು ಬಾರಿ ಕೇಂದ್ರ ಸಚಿವರಾಗಿ, ಒಂದು ಬಾರಿ ಸಚಿವರಾಗಿ ಸೇವೆ ಸಲ್ಲಿಸಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ. ಹಾಗಾಗಿ ಅವರಿಗೆ ಡಿಸಿಎಂ ಹುದ್ದೆ ನೀಡಿದರೆ ಸಮುದಾಯದವರಿಗೆ ಒಂದು ಅವಕಾಶ ನೀಡಿದಂತಾಗುತ್ತದೆ ಎಂದು ಆಗ್ರಹಿಸಿದರು.ಶಾಸಕ ರಮೇಶ್ ಬಂಡಿಸಿದ್ದೇಗೌಡರು ಜಿಲ್ಲೆಯಲ್ಲಿ ಪ್ರಭಾವಿ ನಾಯಕರು. ಮೂರು ಬಾರಿ ಶಾಸಕರಾಗಿ ವಿದ್ಯುತ್ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವರ ತಾಯಿ ವಿಜಯಲಕ್ಷ್ಮಮ್ಮ 3 ಬಾರಿ ಶಾಸಕರಾಗಿ, ತಂದೆ ಬಂಡಿಸಿದ್ದೇಗೌಡ ಶಾಸಕರಾಗಿ, 1 ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ ಎಂದರು.ಹೀಗಾಗಿ ಶಾಸಕ ರಮೇಶ್ ಬಂಡಿಸಿದ್ದೇಗೌಡರು ಅವರಿಗೂ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಡಿಸಿಎಂ ಹಾಗೂ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮುದಾಯದ ಜನರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾದಾರ ಮಹಾ ಸಭಾದ ಅಧ್ಯಕ್ಷೆ ಸುನಂದ, ಮಾದಿಕ ಸಮುದಾಯ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಸಮುದಾಯದ ಮುಖಂಡರಾದ ಸಿದ್ದಪ್ಪ, ನಿಂಗರಾಜು, ಬಸವನಪುರ ಶಿವಕುಮಾರ್, ಜಯಂತಿ, ನರಸಿಂಹ ಮೂರ್ತಿ, ಕುಮಾರ್ ಸೇರಿದಂತೆ ಇತರರು ಇದ್ದರು.