ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಅಭಿಯಾನಕ್ಕೆ ಶಾಸಕ ಡಾ.ಮಂತರ್‌ಗೌಡ ಪಟ್ಟಣದ ನಗರೂರಿನ ಅವರ ಗೃಹ ಕಚೇರಿಯಲ್ಲಿ ಚಾಲನೆ ನೀಡಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಅಭಿಯಾನಕ್ಕೆ ಶಾಸಕ ಡಾ.ಮಂತರ್‌ಗೌಡ ಪಟ್ಟಣದ ನಗರೂರಿನ ಅವರ ಗೃಹ ಕಚೇರಿಯಲ್ಲಿ ಚಾಲನೆ ನೀಡಿದರು. ಶಾಸಕರು ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ನೀಡಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.ತಾಲೂಕಿನ ಪ್ರತಿಯೊಬ್ಬರು ಈ ಅಭಿಯಾನಕ್ಕೆ ಸಹಕಾರ ನೀಡಿಬೇಕು. ಮನೆಗೆ ಬಿಎಲ್‌ಒ ಗಳು ಬಂದಾಗ ಎರಡು ಎಮ್ಯೂಲೇಷನ್ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸೂಕ್ತ ಸಮಯದಲ್ಲಿ ಒಂದು ಅರ್ಜಿಗೆ ಭಾವಚಿತ್ರ ಅಂಟಿಸಿ ಜುಲೈ ೨೯ ರ ಬಿಎಲ್‌ಒಗಳಿಗೆ ತಲುಪಿಸಬೇಕು. ಎಲ್ಲ ಮಾಹಿತಿಗಳನ್ನು ಬಿಎಲ್‌ಒಗಳು ಮನೆಗೆ ಬಂದು ನೀಡಲಿದ್ದಾರೆ. ನಿರ್ಲಕ್ಷ್ಯದಿಂದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.ಪ್ರಜಾಪ್ರಭುತ್ವ ಎನ್ನುವುದು ಕೇವಲ ಒಂದು ಆಡಳಿತ ವ್ಯವಸ್ಥೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಧ್ವನಿ. ಆ ಧ್ವನಿಗೆ ಶಕ್ತಿ ತುಂಬುವುದು ಪ್ರಜೆಗಳ ಕರ್ತವ್ಯವಾಗಿದೆ. ಪ್ರತಿಯೊಂದು ಮತವೂ ದೇಶದ ಭವಿಷ್ಯವನ್ನು ರೂಪಿಸುವ ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪವಿತ್ರ ಕರ್ತವ್ಯವಾಗಿದೆ. ಅಗತ್ಯ ದಾಖಲೆ ನೀಡಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ತಹಸೀಲ್ದಾರ್ ಕೃಷ್ಣಮೂರ್ತಿ, ಚುನಾವಣಾ ವಿಭಾಗದ ಶಿರೇಸ್ತೆದಾರ್ ಲೋಹಿತ್, ಆರ್‌ಐ ಪ್ರಹ್ಲಾದ್ ಇದ್ದರು.