ಹೂವಿನಹಡಗಲಿ: ರಾಷ್ಟ್ರೀಯ ಚುನಾವಣೆ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪಾರದರ್ಶಕವಾಗಿರಲಿ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.
ಇಲ್ಲಿನ ದಾಕ್ಷಾಯಿಣಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಐಆರ್ ಮತದಾರರ, ಪಟ್ಟಿ ಪರಿಷ್ಕರಣೆ ಜಾಗೃತ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಚುನಾವಣೆ ಆಯೋಗ ಸಮಗ್ರ ರೀತಿಯಲ್ಲಿ ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿರುವ ಮತದಾರರನ್ನು ಕಿತ್ತು ಹಾಕುವಂತಹ ಕೆಲಸ ಆಗಬಾರದು. ಕಾಂಗ್ರೆಸ್ ಪಕ್ಷದಿಂದ ನೇಮಕವಾದ ಬಿಎಲ್‌ಎ ಮತದಾರರ ಮನೆ ಬಾಗಿಲಿಗೆ ಹೋಗಿ ಸರಿಯಾದ ಮಾಹಿತಿ ಪಡೆದು, ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಮಾಹಿತಿ ಸರಿಯಾಗಿ ಪಡೆದು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು.
ಬಿಜೆಪಿ ಷಡ್ಯಂತ್ರದಿಂದ ವಿವಿಧ ರಾಜ್ಯಗಳ ಹಾಲಿ ಮುಖ್ಯಮಂತ್ರಿಯನ್ನು ಸೋಲಿಸುವ ಮಟ್ಟಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಪರವಾಗಿರುವ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕುವಂತಹ ಹುನ್ನಾರ ನಡೆದಿದೆ. ಸಂವಿಧಾನ ಬದ್ಧವಾಗಿರುವ ಹಕ್ಕನ್ನು ಕಸಿಯುವಂತಹ ಕೆಲಸವಾಗುತ್ತಿದೆ. ಬಿಜೆಪಿಯ ತಂತ್ರ, ಕುತಂತ್ರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಳಕೆ ಆಗಬಾರದು ಎಂದರು.ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ದೇಶದ ಪ್ರಜೆಗೆ ಅವಮಾನ ಮಾಡುತ್ತಿದೆ, ಬಿಜೆಪಿಗೆ ವಿರೋಧ ಇರುವ ಕಡೆಗಳಲ್ಲಿ ಇಂತಹ ಕೆಲಸಕ್ಕೆ ಬಿಜೆಪಿ ಕೈಹಾಕುತ್ತಿದೆ. ಪಕ್ಷದ ಕಾರ್ಯಕರ್ತರು ಬಹಳ ಎಚ್ಚರಿಕೆಯ ನಡೆಯ ಇರಬೇಕೆಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ ಮಾತನಾಡಿದರು.
ಪ್ರಚಾರ ಸಮಿತಿ ಅಧ್ಯಕ್ಷ ಹಾಲೇಶ ಸೋಗಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವನಗೌಡ ಪಾಟೀಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಶಾಂತನಗೌಡ, ಪುರಸಭೆ ಮಾಜಿ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಜಿಪಂ ಮಾಜಿ ಸದಸ್ಯ ಜಿ.ವಸಂತ, ಪುರಸಭೆ ಮಾಜಿ ಸದಸ್ಯ ಈಟಿ ಮಾಲತೇಶ, ಎಸ್.ದೂದಾನಾಯ್ಕ, ಹುಂಡಿ ಗೌಸ್ ಸಾಹೇಬ್ ಇದ್ದರು.