ಜನಸಂಖ್ಯೆ, ಜನಸಾಂದ್ರತೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಸೇರಿದಂತೆ ವಿವಿಧ ಆಯಾಮಗಳ ನಿಖರ ಮಾಹಿತಿ ಸಂಗ್ರಹವು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ.

ಧಾರವಾಡ:

ದೇಶದ ಅಭಿವೃದ್ಧಿ ಯೋಜನೆಗಳ ರೂಪರೇಷೆ ಸಿದ್ಧಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಜನಗಣತಿ-2027ರ ಕಾರ್ಯವನ್ನು ಪರಿಣಾಮಕಾರಿಯಾಗಿ ಹಾಗೂ ವ್ಯವಸ್ಥಿತವಾಗಿ ಕೈಗೊಳ್ಳುವ ಉದ್ದೇಶದಿಂದ ನಗರದ ಮಹಾನಗರ ಪಾಲಿಕೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಕ್ಷೇತ್ರ ತರಬೇತುದಾರರಿಗೆ ವಿಶೇಷ ತರಬೇತಿ ನಡೆಸಲಾಯಿತು.

ಜನಗಣತಿಯ ಮಾಸ್ಟರ್ ಟ್ರೈನರ್‌ಗಳ ನೇತೃತ್ವದಲ್ಲಿ ನಡೆದ ತರಬೇತಿಯಲ್ಲಿ ಜನಗಣತಿಯ ಮಹತ್ವ, ದತ್ತಾಂಶ ಸಂಗ್ರಹಣೆಯ ವಿಧಾನ, ತಾಂತ್ರಿಕ ಅಂಶಗಳು ಹಾಗೂ ಕ್ಷೇತ್ರಮಟ್ಟದಲ್ಲಿ ಎದುರಾಗಬಹುದಾದ ಸವಾಲುಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಜನಸಂಖ್ಯೆ, ಜನಸಾಂದ್ರತೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಸೇರಿದಂತೆ ವಿವಿಧ ಆಯಾಮಗಳ ನಿಖರ ಮಾಹಿತಿ ಸಂಗ್ರಹವು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಅನುಷ್ಠಾನ, ಸಂಪನ್ಮೂಲಗಳ ಹಂಚಿಕೆ ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಯಲ್ಲಿ ಜನಗಣತಿಯ ದತ್ತಾಂಶ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತರಬೇತಿಯಲ್ಲಿ ವಿವರಿಸಲಾಯಿತು.

ಡಿಜಿಟಲ್ ಗಣತಿಗೆ ಆದ್ಯತೆ:

ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಹಾಗೂ ಮನೆಗಳ ಗಣತಿ ಕಾರ್ಯದ ಪ್ರಕ್ರಿಯೆ, ಮೊಬೈಲ್ ಆ್ಯಪ್ ಮೂಲಕ ಮಾಹಿತಿ ದಾಖಲಿಸುವ ವಿಧಾನ, ಸಂಗ್ರಹಿಸಿದ ಮಾಹಿತಿಯ ನಿಖರತೆ ಮತ್ತು ಗುಣಮಟ್ಟ ಕಾಪಾಡುವ ಕ್ರಮಗಳ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಲಾಯಿತು. ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸುವುದು, ಗಣತಿದಾರರು ಮತ್ತು ಮೇಲ್ವಿಚಾರಕರ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆಯೂ ಮಾಹಿತಿ ಒದಗಿಸಲಾಯಿತು.

ಕ್ಷೇತ್ರ ತರಬೇತುದಾರರು ತಾವು ಪಡೆದ ಜ್ಞಾನ ಮತ್ತು ಕೌಶಲವನ್ನು ಮುಂದಿನ ಹಂತದಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಗಣತಿ ಕಾರ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಪ್ರತಿಯೊಂದು ಹಂತದಲ್ಲೂ ಜಾಗರೂಕತೆ ವಹಿಸಬೇಕು. ನಿಖರ ಹಾಗೂ ವಿಶ್ವಾಸಾರ್ಹ ದತ್ತಾಂಶ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಲಾಯಿತು.

ತರಬೇತಿಯಲ್ಲಿ ಉಪ ಆಯುಕ್ತರಾದ ಅನುರಾಧಾ ವಸ್ತ್ರದ, ಸಹಾಯಕ ನಿರ್ದೇಶಕರಾದ ರಶ್ಮಿ ಕೌಶಿಕ್, ಸಹಾಯಕ ನಿರ್ದೇಶಕ ಕಂಠೆಪ್ಪಗೌಡ ಭಾಗವಹಿಸಿದ್ದರು. ಜನಗಣತಿ ಕೇಂದ್ರ ಕಚೇರಿಯ ಜಿಲ್ಲಾ ಸಂಯೋಜಕ ಮಂಜುನಾಥ, ಮಾಸ್ಟರ್ ಟ್ರೇನರ್ಸ್ ಮಂಜುನಾಥ ಅಡಿವೇರ್, ಎಸ್. ಬಿ. ವಸ್ತ್ರಮಠ, ಭೀಮಪ್ಪ ಅಂಬಿಗೇರ್ ತರಬೇತಿ ನೀಡಿದರು.