ಅಯ್ಯಪ್ಪ ಸ್ವಾಮಿ ಭಕ್ತನಾಗಿರುವ ನಾನು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅಯ್ಯಪ್ಪನ ದೇವಾಲಯವನ್ನು ನಿರ್ಮಿಸಲು ಸಂಕಲ್ಪ ಮಾಡಿ ಇಂದು ಭೂ ವರಹನಾಥ ಸ್ವಾಮಿ ಆಶೀರ್ವಾದವನ್ನು ಪಡೆಯಲು ಪ್ರಥಮ ಬಾರಿಗೆ ಸುಕ್ಷೇತ್ರಕ್ಕೆ ಆಗಮಿಸಿ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಾಣವಾಗಿರುವ ಸ್ವಾಮಿಯ ಮೂರ್ತಿ ಅಭಿಷೇಕವನ್ನು ಕಣ್ತುಂಬಿ ಕೊಂಡಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ವರಾಹನಾಥ ಕಲ್ಲಹಳ್ಳಿಯ ಭೂವರಾಹನಾಥ ಸ್ವಾಮಿ ದೇವಾಲಯದಲ್ಲಿ ರೇವತಿ ನಕ್ಷತ್ರದ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಭೂ ವರಾಹನಾಥ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿ ಶ್ರೀಗಂಧ, ಅರಿಶಿಣ, ಕುಂಕುಮ, ಎಳನೀರು, ಹಾಲು, ಬಗೆ ಬಗೆಯ ಹೂವುಗಳು ಮುಂತಾದವುಗಳಿಂದ ಅಭಿಷೇಕ ಮಾಡಲಾಯಿತು.

ವಿಶೇಷ ಪೂಜಾಭಿಷೇಕಗಳ ಅನಂತರ ಭೂ ದೇವಿ ಸಮೇತನಾದ ವರಹಾನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದ ಪ್ರಾಂಗಣದ ಸುತ್ತ ಮೆರವಣಿಗೆ ಮಾಡಲಾಯಿತು. ಉತ್ಸವ ಮೂರ್ತಿ ಮೆರವಣಿಗೆ ಮತ್ತು ವಿಶೇಷ ಪೂಜಾ ಕಾರ್ಯಗಳಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಾಗವಹಿಸಿ ಸಂಭ್ರಮಿಸಿದರು.

ದೇವಾಲಯದ ಪ್ರಧಾನ ಟ್ರಷ್ಠಿ ಶ್ರೀನಿವಾಸ ರಾಘವನ್ ನೇತೃತ್ವದಲ್ಲಿ ರೇವತಿ ನಕ್ಷತ್ರದ ವಿಶೇಷ ಅಭಿಷೇಕ, ಪುಷ್ಪಾಭಿಷಕ, ಭೂ ವರಾಹ ಹೋಮ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆದವು.

ರಾಜ್ಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಇಂದಿನ ಪೂಜೋತ್ಸವದಲ್ಲಿ ಪಾಲ್ಗೊಂಡು ಭೂ ವರಾಹನಾಥನ ದರ್ಶನ ಪಡೆದು ಕೃತಾರ್ಥರಾದರು.

ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕಂಗ ಪಕ್ಷದ ನಾಯಕ ಸುರೇಶ್ ಬಾಬು, ತಿರುಮಲ ತಿರುಪತಿಯ ಮಾದರಿಯಲ್ಲಿ ತಾಲೂಕಿನ ಭೂವರಹನಾಥ ಕ್ಷೇತ್ರವು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.

ಅಯ್ಯಪ್ಪ ಸ್ವಾಮಿ ಭಕ್ತನಾಗಿರುವ ನಾನು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅಯ್ಯಪ್ಪನ ದೇವಾಲಯವನ್ನು ನಿರ್ಮಿಸಲು ಸಂಕಲ್ಪ ಮಾಡಿ ಇಂದು ಭೂ ವರಹನಾಥ ಸ್ವಾಮಿ ಆಶೀರ್ವಾದವನ್ನು ಪಡೆಯಲು ಪ್ರಥಮ ಬಾರಿಗೆ ಸುಕ್ಷೇತ್ರಕ್ಕೆ ಆಗಮಿಸಿ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಾಣವಾಗಿರುವ ಸ್ವಾಮಿಯ ಮೂರ್ತಿ ಅಭಿಷೇಕವನ್ನು ಕಣ್ತುಂಬಿ ಕೊಂಡಿದ್ದೇನೆ ಎಂದರು.