ಸಚಿವರಿಂದ ಸಮುದ್ರರಾಜನಿಗೆ ವಿಶೇಷ ಪೂಜೆ, ಬಾಗಿನ

| Published : Sep 09 2024, 01:31 AM IST

ಸಾರಾಂಶ

ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಭಾನುವಾರ ಮೀನುಗಾರರು ಹೆಚ್ಚು ನಂಬಿರುವ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮೀನುಗಾರರಿಗೆ ಒಳಿತು ಮಾಡುವಂತೆ ಪ್ರಾರ್ಥಿಸಿದರು.

ಭಟ್ಕಳ: ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದ ಹಿನ್ನೆಲೆ ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಅವರು ಭಾನುವಾರ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಲ್ಲದೇ ಸಮುದ್ರರಾಜನಿಗೂ ಸಹ ಬಾಗಿನ ಅರ್ಪಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ಈ ಸಲ ಮೀನುಗಾರಿಕೆ ಆರಂಭವಾದರೂ ಭಾರೀ ಮಳೆ, ಗಾಳಿಯ ಹಿನ್ನೆಲೆ ಮತ್ತು ಮತ್ಸ್ಯಕ್ಷಾಮದಿಂದ ಮೀನುಗಾರಿಕಾ ಉದ್ಯಮದ ಮೇಲೆ ಪರಿಣಾಮ ಬೀರಿತ್ತು. ಪ್ರಕೃತಿ ವಿಕೋಪ ಮತ್ತು ಮತ್ಸ್ಯಕ್ಷಾಮದ ಹಿನ್ನೆಲೆ ಹೆಚ್ಚಿನ ಬೋಟುಗಳು ಮೀನುಗಾರಿಕೆಗೆ ಇಳಿದಿರಲಿಲ್ಲ. ಕೆಲವು ಬೋಟುಗಳು ಇಳಿದಿದ್ದರೂ ದಿನಂಪ್ರತಿ ಮೀನಿಲ್ಲದ ವಾಪಸ್ ಬರುವುದು ಸಾಮಾನ್ಯವಾಗಿತ್ತು.

ಇದರಿಂದ ಮೀನುಗಾರಿಕಾ ಉದ್ಯಮ ಸುಸೂತ್ರವಾಗಿ ಆರಂಭವಾಗದ ಮತ್ತು ಮೀನುಗಾರಿಕೆ ಮೇಲೆ ಭಾರಿ ಪರಿಣಾಮ ಬೀರಿದ ಹಿನ್ನೆಲೆ ಮೀನುಗಾರರು ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಭಾನುವಾರ ಮೀನುಗಾರರು ಹೆಚ್ಚು ನಂಬಿರುವ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮೀನುಗಾರರಿಗೆ ಒಳಿತು ಮಾಡುವಂತೆ ಪ್ರಾರ್ಥಿಸಿದರು.

ಅದೇ ರೀತಿ ಸಚಿವರು ಮೀನುಗಾರರ ಮುಖಂಡರ ಜತೆಯಲ್ಲಿ ಖುದ್ದಾಗಿ ಬೋಟನ್ನು ಚಲಾಯಿಸಿಕೊಂಡು ಹೋಗಿ ಸಮುದ್ರ ರಾಜನಿಗೂ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಮೀನುಗಾರರ ಮುಖಂಡರಾದ ಜಟಕಾ ಮೊಗೇರ, ಯಾದವ ಮೊಗೇರ, ವೆಂಕಟ್ರಮಣ ಮೊಗೇರ, ನಾರಾಯಣ ಮೊಗೇರ ಸೇರಿದಂತೆ ಹಲವು ಮೀನುಗಾರ ಮುಖಂಡರು, ಬೋಟ ಮಾಲೀಕರು ಇದ್ದರು.