ಸಾರಾಂಶ
ಮಾಗಡಿ: ತಾಲೂಕಿನ ಚಕ್ರಬಾವಿ ಗ್ರಾಮದ ಐತಿಹಾಸಿಕ ಕೆಂಪೇಗೌಡರ ಕಾಲದ ಕೋಡಿ ಬಸವಣ್ಣ ಸ್ವಾಮಿ ಹಾಗೂ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಗ್ರಾಮದ ಒಳತಿಗಾಗಿ ಭಾನುವಾರ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಪ್ರತಿ ವರ್ಷವೂ ಗ್ರಾಮದ ವತಿಯಿಂದ ಮಳೆ, ಬೆಳೆ ಚೆನ್ನಾಗಿ ಆಗಲೆಂದು ಬೆಟ್ಟದ ಸಿದ್ದಪ್ಪನಿಗೆ ಹರಕೆ ಕಟ್ಟಿ ಗ್ರಾಮಸ್ಥರೆಲ್ಲಾ ಬೆಟ್ಟಕ್ಕೆ ತೆರಳಿ ಬೆಟ್ಟದ ಮೇಲಿನ ಗುಹೆಯಲ್ಲಿ ನೆಲೆಸಿರುವ ಸಿದ್ದಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ನೈವೇದ್ಯ ಅರ್ಪಿಸಿದ ಬಳಿ ಗ್ರಾಮಸ್ಥರೆಲ್ಲರು ಸಾಮೂಹಿಕ ಭೋಜನ ಮಾಡಿ ಮನೆಗೆ ತೆರಳುತ್ತಿದ್ದಂತೆ ವಾಡಿಕೆಯಂತೆ ಮಳೆ ಬರುತ್ತದೆ ಎಂಬು ನಂಬಿಕೆ. ಅದೇ ರೀತಿ ಬೆಟ್ಟದ ಸಿದ್ದಪ್ಪನಿಗೆ ಮಹಾಮಂಗಳಾರತಿ ಮಾಡುತ್ತಿದ್ದ ಸಮಯದಲ್ಲಿ ತುಂತುರು ಮಳೆ ಬಂದಿದ್ದು ಸಂಜೆ ಚಕ್ರಬಾವಿ ಗ್ರಾಮದಲ್ಲಿ ಭರ್ಜರಿ ಮಳೆಯಾಗಿದೆ.ನಾಡಪ್ರಭು ಕೆಂಪೇಗೌಡರು ವಿಶ್ರಾಂತಿ ಪಡೆಯುತ್ತಿದ್ದ ಬೆಟ್ಟ: ಕೆಂಪೇಗೌಡರು ವಿಶ್ರಾಂತಿ ಪಡೆಯಲು ಬೆಟ್ಟದ ಸಿದ್ದಪ್ಪ ಸನ್ನಿಧಿಗೆ ಹೋಗುತ್ತಿದ್ದರು ಎಂಬ ಇತಿಹಾಸವಿದ್ದು ಬೆಟ್ಟದ ಮೇಲೆ ಈಗಲೂ ಕೆಂಪೇಗೌಡರ ಪಾದ ಹಾಗೂ ಕೆಂಪೇಗೌಡರ ಕಾಲದ ಕುದುರೆ ಹೆಜ್ಜೆ ಗುರುತನ್ನು ಕಾಣಬಹುದು. ಪ್ರತಿ ವರ್ಷವೂ ಬೆಟ್ಟದ ಸಿದ್ದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಬೆಟ್ಟದ ಮೇಲೆ ದೀಪ ಹಚ್ಚಿ ಬರುವುದರಿಂದ ಗ್ರಾಮಕ್ಕೆ ಒಳಿತಾಗುತ್ತಿದೆ ಎಂದು ಗ್ರಾಮದ ಹಿರಿಯ ಮುಖಂಡ ಸೀಮೆಎಣ್ಣೆ ರಾಜಣ್ಣ ವಿವರಿಸಿದರು.
ಮೂಲ ಸೌಲಭ್ಯಕ್ಕೆ ಒತ್ತು:ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೆಂಪೇಗೌಡರ ಕಾಲದ ಬೆಟ್ಟದ ಸಿದ್ದಪ್ಪನಿಗೆ ತೆರಳಲು ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ರಸ್ತೆ ವ್ಯವಸ್ಥೆ ಬೆಟ್ಟದ ಮೇಲೆ ದೀಪದ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳನ್ನು ನೀಡಿದರೆ ಪ್ರವಾಸಿ ತಾಣವಾಗಿ ಮಾರ್ಪಡಿಸಬಹುದಾಗಿದ್ದು ಶಾಸಕ ಬಾಲಕೃಷ್ಣ ಪ್ರವಾಸೋದ್ಯಮ ಸಚಿವರಿಂದ ರಸ್ತೆ ವ್ಯವಸ್ಥೆ ಮಾಡಿಸುವಂತೆ ಚಕ್ರಬಾವಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸಾಮೂಹಿಕ ಭೋಜನ :ಚಕ್ರಬಾವಿ ಗ್ರಾಮಸ್ಥರು ಬೆಟ್ಟದ ಸಿದ್ದಪ್ಪನ ಹೆಸರಲ್ಲಿ(ಪರ) ಸಾಮೂಹಿಕ ಭೋಜನ ಮಾಡುವುದು ವಿಶೇಷ. ಗ್ರಾಮದಲ್ಲಿ ಎಲ್ಲಾ ಮನೆಯಿಂದ ಅಕ್ಕಿ, ಬೇಳೆ, ತರಕಾರಿ ಹಾಗೂ ವಿವಿಧ ದವಸ-ಧಾನ್ಯ ಸಂಗ್ರಹಿಸಿ ಗ್ರಾಮಸ್ಥರೇ ಸೇರಿ ಊಟ ತಯಾರಿಸಿ ಸಾಮೂಹಿಕ ಭೋಜನ ಮಾಡುವರು. ಇಲ್ಲಿ ಜಾತಿ ಭೇದವಿಲ್ಲದೆ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಭಾಗವಹಿಸುವುದು ವಿಶೇಷ. ಚಕ್ರಬಾವಿ ಗ್ರಾಮಕ್ಕೆ ಆಗಮಿಸಿರುವ ಜಿಕೆವಿಕೆ ಬೆಂಗಳೂರು ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಅನುಭವ ಪಡೆದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಬಸವರಾಜು ಪುಟಾಣಿ ಕುಮಾರ್, ಪಂಚಾಕ್ಷರಿ, ಈರಯ್ಯ, ರವೀಂದ್ರ, ಅಂಗಡಿ ಕುಮಾರ್, ಬೈರೇಶ್, ಶ್ರೀಧರ್, ಜಗದೀಶ್, ಅಂಗಡಿ ಸೂರಿ, ಶೈಲೇಶ್, ನಾಗರಾಜು, ದೀಪಕ್, ಮಹೇಶ್, ಕಿರಣ್, ವಾಟರ್ ಮ್ಯಾನ್ ರಾಜಣ್ಣ, ದೇವರಾಜು, ಸುರೇಶ್, ಮನು, ಬಸವರಾಜು, ಬೆಳಗುಂಬ ವಿಶ್ವನಾಥ್ ಭಾಗವಹಿಸಿದ್ದರು.(ಫೋಟೊ ಕ್ಯಾಪ್ಷನ್)
ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಕೆಂಪೇಗೌಡರ ಕಾಲದ ಕೋಡಿ ಬಸವಣ್ಣಸ್ವಾಮಿ ಹಾಗೂ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಗ್ರಾಮಸ್ಥರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.