ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮನುಕುಲದ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕಂತೇನಹಳ್ಳಿ ಶನಿಮಹಾತ್ಮ ದೇವಸ್ಥಾನದ ಸನ್ನಿಧಿಯಲ್ಲಿ ಕೋಟಿ ದತ್ತ ಜಪ ಯಜ್ಞ ಫಲ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರೂ ಆದ ಮುರುಳಿ ಮಂದಾರ್ತಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು, ಮಕ್ಕಳು ಒಳಗೊಂಡಂತೆ ಆಸಕ್ತ ಸದ್ಭಕ್ತರು, ಈಗಾಗಲೇ ಶ್ರದ್ಧಾಭಕ್ತಿಯಿಂದ ಒಂದು ಕೋಟಿ ಹೆಚ್ಚಾಗಿ ದತ್ತಜಪ ಪಾರಾಯಣ ಮಾಡಿದ್ದಾರೆ. ಇದರ ಫಲಸಮರ್ಪಣೆಯನ್ನು ಜು. ೧೦ರಿಂದ ೧೨ರವರೆಗೆ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯದಂತೆ ಯಜ್ಞದ ಫಲ ಸಮರ್ಪಣೆ ಮಾಡಲಾಗುವುದು ಎಂದರು.
ಮೂರು ದಿನಗಳ ಕಾಲ ನಡೆಯುವ ಈ ಒಂದು ಧಾರ್ಮಿಕ ಸಮಾರಂಭವು, ಪ್ರತಿದಿನ ವಿಶೇಷ ಪೂಜೆಗಳಿಂದ, ಜಪ-ತಪ ಹಾಗೂ ಯಜ್ಞ ಯಾಗಾದಿಗಳಿಂದ ನೆರವೇರಲಿದ್ದು, ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ದತ್ತಾತ್ರೇಯ ಸ್ವಾಮಿ ಹಾಗೂ ಕ್ಷೇತ್ರಪಾಲಕ ಶನೇಶ್ವರ ಸ್ವಾಮಿ ಅವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.ಜು.೧೦ರಂದು ಬೆಳಗ್ಗೆ ಗುರುಪ್ರಾರ್ಥನೆ, ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಅಂಕುರಾರ್ಪನೆ, ಕೌತುಕಬಂಧನ, ಯಾಗಶಾಲಾ ಪ್ರವೇಶ, ಸಹಸ್ರ ಮೋದಕ ಗಣಪತಿ ಹೋಮ, ಗುರುಚರಿತ್ರೆ ಪಾರಾಯಣ ನಡೆದರೆ, ೧೧ ರಂದು ಬೆಳಗ್ಗೆ ದತ್ತಹೋಮ, ಪೂರ್ಣಾಹುತಿ, ಮಧ್ಯಾಹ್ನ ಭಕ್ತಾದಿಗಳಿಗೆ ಸಾಮೂಹಿಕ ಅನ್ನ ಸಂತರ್ಪಣೆ, ಸಂಜೆ ೪ ರಿಂದ ೮ ವರೆಗೆ ಗುರುಚರಿತ್ರೆ ಪಾರಾಯಣ, ರಾತ್ರಿ ಮಹಾ ಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ನಡೆದರೆ ಜು.೧೨ರಂದು ಬೆಳಗ್ಗೆ ೮ಕ್ಕೆ ದತ್ತಹೋಮ ನಡೆಯಲಿದ್ದು, ೧೦ ಗಂಟೆಗೆ ನಗರದ ಪ್ರವಾಸಿ ಮಂದಿರದ ಆವರಣದಿಂದ ಕಂತೇನಹಳ್ಳಿ ದೇವಾಲಯದವರೆಗೆ ಕುಂಚಿಟಿಗ ಮಹಾ ಸಂಸ್ಥಾನ ಮಠದ ಕಾಯಕಯೋಗಿ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ಹಾಗೂ ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಪಾರಂಪರ ಅವಧೂತರಾದ ಸತೀಶ್ ಶರ್ಮಾಜಿ ಮಹಾರಾಜರು ಹಾಗೂ ಹುಬ್ಬಳ್ಳಿ ಶ್ರೀ ಭಗವತ್ಪಾದರ ಆಶ್ರಮದ ಶ್ರೀ ರಮೇಶ ಅವಧೂತರ ಮೆರವಣಿಗೆ ನಡೆಯಲಿದ್ದು, ನಂತರ ಧಾರ್ಮಿಕ ಸಮಾರಂಭದಲ್ಲಿ ಯತಿವರ್ಯರು ಆಶೀರ್ವಚನ ನೀಡುವರು. ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿಯ ವೀರಭದ್ರಪ್ಪ, ನಗರಸಭೆ ಸದಸ್ಯ ಯುವರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್. ಮಂಜುನಾಥ್ ಉಪಸ್ಥಿತರಿದ್ದರು.