ಮುಗ್ಧ ಮಕ್ಕಳು ಕೆಲವೊಂದು ದೇಹದ ನ್ಯೂನತೆ ಹೊಂದಿರುತ್ತಾರೆ. ಅವರಲ್ಲಿಯೂ ಎಲ್ಲ ಸಾಮರ್ಥ್ಯಗಳಿರುತ್ತವೆ
ಗದಗ: ವಿಶೇಷಚೇತನ ಮಕ್ಕಳು ಸಾಧಿಸುವ ಸಾಮರ್ಥ್ಯವುಳ್ಳವರು, ಅವರಿಗೆ ನಮ್ಮೆಲ್ಲರ ಪ್ರೋತ್ಸಾಹ ಸಹಕಾರ ಬೇಕು ಹಾಗೂ ಅವರ ಪ್ರತಿಭೆಗೆ ಸ್ಫೂರ್ತಿ ನೀಡಿ ಕಲಿಕಾ ವಾತಾವರಣ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ನಗರದ ಹುಡ್ಕೋ ಕಾಲನಿಯ ಸರ್ಕಾರಿ ಶಾಲೆ ನಂ. 15ರಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಜರುಗಿದ ವಿಶೇಷಚೇತನ ಮಕ್ಕಳಿಗಾಗಿ ಪರಿಸರ ನಿರ್ಮಾಣ ಹಾಗೂ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಗ್ಧ ಮಕ್ಕಳು ಕೆಲವೊಂದು ದೇಹದ ನ್ಯೂನತೆ ಹೊಂದಿರುತ್ತಾರೆ. ಅವರಲ್ಲಿಯೂ ಎಲ್ಲ ಸಾಮರ್ಥ್ಯಗಳಿರುತ್ತವೆ. ಅವರಿಗಾಗಿ ಕೆಲವು ರಚನಾತ್ಮಕ ಕಾರ್ಯ ಹಾಕಿಕೊಂಡು ಉತ್ತಮ ವಾತಾವರಣ, ಪರಿಸರ ಸ್ನೇಹಿ ಕಲಿಕಾ ಉಪಯುಕ್ತತೆಗೆ ಪೂರಕವಾಗುವಂತಹ ಪರಿಸರ ನಾವು ನಿರ್ಮಿಸಬೇಕು ಎಂದರು.
ಪ್ರಮೀಳಾ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷಚೇತನರ ಕುರಿತಾಗಿ ಸಮಾಜದಲ್ಲಿ ತಿಳಿವಳಿಕೆ ಕಾರ್ಯಕ್ರಮ ಜರುಗುತ್ತಿರುವುದರಿಂದ ಆ ಮಕ್ಕಳ ಬಗೆಗೆ ಕಾಳಜಿ ಹಾಗೂ ಪರಿಸರ ನಿರ್ಮಾಣ ಸಾಧ್ಯವಾಗುತ್ತಿದೆ ಎಂದರು.ಶಾಲಾ ಮುಖ್ಯೋಪಾಧ್ಯಾಯಿನಿ ವಿ.ಎನ್.ಬಸಾಪೂರ ಅಧ್ಯಕ್ಷತೆ ವಹಿಸಿದ್ದರು. ಪಾಲಕರಾದ ಪ್ರಜ್ವಲ್ ಮುದಗಲ್ಲ, ಶಂಕರ ದಲಭಂಜನ, ಮಲ್ಲಿಕಾರ್ಜುನ ಹಡಪದ, ಗಿರಿಯಪ್ಪ ಗೊಲ್ಲರ, ಮಹದೇವಪ್ಪ ಜಿಂಕಾಳೆ, ಸಂತೋಷ ಪಾಟೀಲ, ನಿವೇದಿತಾ ಸಂಶಿ, ರೇಣುಕಾ ಗೌಳಕೇರ, ಮಹಾದೇವಿ ಉಪಸ್ಥಿತರಿದ್ದರು. ಬಿ.ಯಶೋಧಾ ಸ್ವಾಗತಿಸಿದರು, ಶೋಭಾ ವಗ್ಗಿ ವಂದಿಸಿದರು.