ಸೇವಾ ಭಾರತಿ ಮಂಗಳೂರು ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಕೆನರಾ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾನುವಾರ ‘ವಿಶಿಷ್ಟರಿಗಾಗಿ ವಿಶಿಷ್ಟಮೇಳ’

ಮಂಗಳೂರು: ಸೇವಾ ಭಾರತಿ ಮಂಗಳೂರು ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಕೆನರಾ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾನುವಾರ ‘ವಿಶಿಷ್ಟರಿಗಾಗಿ ವಿಶಿಷ್ಟಮೇಳ’ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ನಡೆಯಿತು.ದ.ಕ., ಉಡುಪಿ ಜಿಲ್ಲೆಗಳ ವಿಶೇಷ ಶಾಲೆಗಳ ಮಕ್ಕಳ ಸಹಿತ ಎಲ್ಲ ವಯೋಮಾನದ ದಿವ್ಯಾಂಗರು ಭಾಗವಹಿಸಿದ್ದರು. ಅವರಿಗೆ ಮನರಂಜನೆ ಒದಗಿಸುವ ಜತೆಗೆ ಅವರಲ್ಲಿ ಚೈತನ್ಯ, ವಿಶ್ವಾಸ ತುಂಬಿಸುವುದು ಮೇಳದ ಉದ್ದೇಶವಾಗಿತ್ತು.

ಮೇಳದಲ್ಲಿ ದಿವ್ಯಾಂಗರು ಕುದುರೆ, ಒಂಟೆ ಸವಾರಿ ಮಾಡಿ ಖುಷಿಪಟ್ಟರೆ, ತಿರುಗುವ ತೊಟ್ಟಿಲಿನಲ್ಲಿ ಕುಳಿತು ಅದರ ವಿಶಿಷ್ಟ ಅನುಭವ ಪಡೆದರು. ಹಲವು ಬಗೆಯ ತಿಂಡಿ ತಿನಿಸುಗಳ ಮಳಿಗೆಗಳಿಗೆ ಹೋಗಿ ಮನಸಾರೆ ತಿಂದು ಸಂಭ್ರಮಿಸಿದರು. ತಿಲಕ ಇಡುವುದು, ರಿಂಗ್‌ ಎಸೆಯುವುದು, ಡಬ್ಬಿಗೆ ಗುರಿ, ಕುದುರೆಗೆ ಬಾಲ ಬಿಡಿಸುವುದು, ಬಕೆಟ್‌ಗೆ ಬಾಲ್‌ ಹಾಕುವುದು, ಕವಡೆ ಆಟ, ಮೆಹಂದಿ ಹಾಕುವುದು ಮುಂತಾದ ಮನರಂಜನಾ ಆಟಗಳಲ್ಲಿ ಪಾಲ್ಗೊಂಡು, ಪಾನಿಪುರಿ, ಬೇಲ್‌ಪುರಿ, ಐಸ್‌ ಕ್ಯಾಂಡಿ, ಐಸ್‌ಕ್ರೀಂ, ಸಕ್ಕರೆ ಮಿಠಾಯಿ, ಉಂಡೆ, ಚಕ್ಕುಲಿ ತಿನ್ನುತ್ತಾ ಹಾಡಿ ನಲಿದರು. ಇಡೀ ವಾತಾವರಣ ಸಡಗರ, ಸಂಭ್ರಮದಿಂದ ಕೂಡಿತ್ತು.

ಸಮಾನ ಅವಕಾಶ ನೀಡಿ:

ಮೇಳವನ್ನು ಉದ್ಘಾಟಿಸಿದ ನಿಟ್ಟೆ ವಿವಿ ಉಪ ಸಹ ಕುಲಪತಿ ಡಾ. ಶಾಂತಾರಾಮ್‌ ಶೆಟ್ಟಿ ಮಾತನಾಡಿ, ಸೇವಾ ಭಾರತಿ ಮೂಲಕ 25 ವರ್ಷಗಳಿಂದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ಆಯೋಜಿಸುತ್ತಿರುವುದು ಶ್ಲಾಘನೀಯ. ದೇಶದಲ್ಲಿ ಶೇ.2ರಷ್ಟು ಜನತೆ ದಿವ್ಯಾಂಗರಿದ್ದಾರೆ. ದಿವ್ಯಾಂಗರಿಗೆ ಅನುಕಂಪ ಬೇಡ, ಸಮಾನ ಅವಕಾಶ ನೀಡಿ ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಕರ್ಣಾಟಕ ಬ್ಯಾಂಕ್‌ ಮಹಾಪ್ರಬಂಧಕ ವಿನಯ ಭಟ್‌, ಎಂಆರ್‌ಪಿಎಲ್‌ ಮಂಗಳೂರು ಮಾನವ ಸಂಪನ್ಮೂಲ ವಿಭಾಗದ ಜಿಜಿಎಂ ಕೃಷ್ಣ ಹೆಗ್ಡೆ ಮಿಯಾರ್‌, ಕೆನರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್‌ ಅತಿಥಿಗಳಾಗಿದ್ದರು.18 ವರ್ಷ ಮೇಲ್ಪಟ್ಟ ಸ್ವಲೀನತೆ (ಆಟಿಸಂ), ಸೆರೆಬ್ರಲ್‌ ಪಾಲ್ಸಿ, ಮಾನಸಿಕ ಕುಂಠಿತ ದಿವ್ಯಾಂಗರಿಗೆ ಕಾನೂನು ಬದ್ಧ ಪೋಷಕತ್ವ ಪ್ರಮಾಣ ಪತ್ರ ಪಡೆಯುವ ಬಗ್ಗೆ ಮತ್ತು ನಿರಾಮಯ ಆರೋಗ್ಯ ಕಾರ್ಡ್‌ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ‘ಸಕ್ಷಮ’ ಸಂಸ್ಥೆ ವತಿಯಿಂದ ದಿವ್ಯಾಂಗರ ಸಬಲೀಕರಣ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ಒದಗಿಸಲಾಯಿತು. 7 ಮಂದಿ ದಿವ್ಯಾಂಗ ವಿದ್ಯಾರ್ಥಿ ಸಾಧಕರನ್ನು ಸನ್ಮಾನಿಸಲಾಯಿತು.ಆಶಾಜ್ಯೋತಿ ಅಧ್ಯಕ್ಷೆ ಗೀತಾ ಲಕ್ಷ್ಮೇಶ್‌, ಚೇತನಾ ಶಾಲೆ ಮುಖ್ಯಶಿಕ್ಷಕಿ ಸುಪ್ರೀತಾ, ಸೇವಾಭಾರತಿ ಮಂಗಳೂರು ಗೌರವ ಕಾರ್ಯದರ್ಶಿ ಎಚ್‌. ನಾಗರಾಜ ಭಟ್‌, ಆಶಾಜ್ಯೋತಿ ಜೊತೆ ಕಾರ್ಯದರ್ಶಿ ಗಣರಾಜ ವೈ., ಖಜಾಂಚಿ ಕೆ. ವಿಶ್ವನಾಥ ಪೈ, ಜೊತೆ ಕಾರ್ಯದರ್ಶಿ ಫಣೀಂದ್ರ ಮತ್ತಿತರರು ಇದ್ದರು.