ಔದ್ಯೋಗಿಕ ಕ್ಷೇತ್ರದಲ್ಲಿ ಸಂಶೋಧನಾತ್ಮಕ ತಂತ್ರಜ್ಞಾನದ ಕೌಶಲ್ಯದ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು ಎಂದು ಡೇಟಾಲಾಜಿಕ್ಸ್ ಇಂಡಿಯಾದ ಮಾನವ ಸಂಪನ್ಮೂಲ ಅಭಿವೃದ್ದಿಯ ಅಧಿಕಾರಿಗಳಾದ ಶ್ರೀನಿವಾಸನ್ ವರದರಾಜನ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಔದ್ಯೋಗಿಕ ಕ್ಷೇತ್ರದಲ್ಲಿ ಸಂಶೋಧನಾತ್ಮಕ ತಂತ್ರಜ್ಞಾನದ ಕೌಶಲ್ಯದ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು ಎಂದು ಡೇಟಾಲಾಜಿಕ್ಸ್ ಇಂಡಿಯಾದ ಮಾನವ ಸಂಪನ್ಮೂಲ ಅಭಿವೃದ್ದಿಯ ಅಧಿಕಾರಿಗಳಾದ ಶ್ರೀನಿವಾಸನ್ ವರದರಾಜನ ಹೇಳಿದರು.ನಗರದ ಬಿ.ವಿ.ವಿ ಸಂಘದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಬಿಮ್ಸ್) ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಎಂಬಿಎ ವಿದ್ಯಾರ್ಥಿಗಳ ಪ್ಲೇಸ್ಮೆಂಟ್ ಸಕ್ಸಸ್ಮೀಟ್ - 2025 ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವಿತರಿಸಿ ಮಾತನಾಡಿದರು.
ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಲೆಕ್ಕವಿಲ್ಲದಷ್ಟು ಸಂಶೋಧನೆ ಮಾಡಬಹುದಾದ ಅನೇಕ ವಿಷಯಗಳಿವೆ.ಅವುಗಳಲ್ಲಿ ಸಂಸ್ಥೆಗಳ ನಡವಳಿಕೆ, ನೌಕರರ ಧಾರಣ, ಭಾವನಾತ್ಮಕ ಬುದ್ಧಿವಂತಿಕೆ, ಕಾರ್ಯಪಡೆ ವೈವಿಧ್ಯತೆ, ಉದ್ಯೋಗಿ ಕಾರ್ಯಕ್ಷಮತೆ, ಗ್ರಾಹಕ ನಡವಳಿಕೆ, ಉದ್ಯೋಗಿ ಸಂಬಂಧ, ಸೇರಿದಂತೆ ಭಾವನಾತ್ಮಕ ಬುದ್ಧಿವಂತಿಕೆಯ ಕುರಿತು ಸಂಶೋಧನೆ ಅಗತ್ಯವಿದ್ದು, ವೃತ್ತಿಪರ ಹಾಗೂ ಔದ್ಯೋಗಿಕಕ್ಷೇತ್ರದಲ್ಲಿ ಕೌಶಲ್ಯದ ಜೊತಗೆ ನಮ್ಮ ಉತ್ತಮ ವ್ಯಕ್ತಿತ್ವ ನಡುವಳಿಕೆಗಳು ಮುಖ್ಯವಾಗುತ್ತದೆ, ಇವುಗಳು ಸಂದರ್ಶನಲ್ಲಿ ಮುಖ್ಯ ಪಾತ್ರವಹಿಸುತ್ತವೆ ಎಂದರು.ಅತಿಥಿಗಳಾದ ಆರ್.ಡಿ.ಎಫ್ & ಬಿಇಸಿ - ಎಸ್ಟಿಇಪಿ ಕಾರ್ಯನಿರ್ವಾಹಕ ರ್ದೇಶಕರಾದ ಡಾ. ಬಿ.ಎಸ್. ಅಂಗಡಿ ಹಾಗೂ ರೆಂಟೋಕಿಲ್‌ನ ಸೀನಿಯರ್ ಎಕ್ಸಿಕ್ಯೂಟಿವ್ ಅಕ್ಷಯ ಭಟ್ ಮಾತನಾಡಿ, ಪ್ಲೇಸ್ಮೆಂಟ್ ಸಕ್ಸಸ್ ಒಂದು ಸಾರ್ಥಕ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರ ಹಾಗೂ ಪಾಲಕರ ಕನಸಾಗಿದೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಜೊತೆಗೆ ಉದ್ಯೋಗ ಒದಗಿಸುತ್ತಿರುವ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಎಸ್, ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಎಚ್.ಎಸ್.ಕೆ ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉಪ ಪ್ರಾಂಶುಪಾಲರಾದ ಡಾ.ಸಿ.ಎಸ್. ಹಿರೇಮಠ ಮಾತನಾಡಿ, ಸ್ವಗೃಹೇ ಪೂಜ್ಯತೆ ಪಿತೃಃ ಸ್ವದೇಶೆ ಪೂಜ್ಯತೆ ರಾಜಾಃ ವಿದ್ವಾನ್ ಸರ್ವತ್ರ ಪೂಜ್ಯತೆ ಎಂದು ಶ್ಲೋಕದ ಅರ್ಥ ತಿಳಿಸಿದ ಅವರು ರಾಷ್ಟ್ರಾಭ್ಯುದಯಕ್ಕಾಗಿ ಹಗಲಿರುಳು ಜ್ಞಾನಧಾರೆಯ ಅರಿವು ವಿದ್ಯಾರ್ಥಿಗಳಿಂದಾಗಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ನಿರ್ದೇಶಕ ಡಾ. ಪ್ರಕಾಶ್ ಕೆ. ವಡವಡಗಿ ಮಾತನಾಡಿ, ಬಾಗಲಕೋಟೆಯ ಪ್ರತಿಭೆಗಳು ಜಾಗತಿಕ ಕಂಪನಿಗಳ ಗಮನ ಸೆಳೆದಿರುವುದು ಸಂಸ್ಥೆಯ ಶಿಕ್ಷಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹಾಗೂ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿಯವರ ಆಶಯದಂತೆ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.
ಕಾರ್ಪೋರೇಟ್ ವಲಯದ ಪ್ರಮುಖ ಎಕ್ಸೈಡ್ ಇಂಡಸ್ಟ್ರೀಸ್ ದಕ್ಷಿಣ ವಲಯದ ವ್ಯಾಪಾರ ಮಾನವ ಸಂಪನ್ಮೂಲ ಅಧಿಕಾರಿ ಉದಯವರ್ ಕೆ., ಕ್ಯಾಡ್ಮ್ಯಾಕ್ಸ್ ಸೊಲ್ಯೂಷನ್ಸ್ ಯೋಜನಾ ನಿರ್ವಹಣೆಯ ವಿಶೇಷ ಉಪಕ್ರಮ ಅಧಿಕಾರಿ ಪ್ರಜ್ವಲ್ ವಿ ಚಟ್ಪಲ್ಲಿ, ಎನ್.ಜೆ. ಇಂಡಿಯಾ ಇನ್ವೆಸ್ಟ್ ಪಿಸಿಐ ಮಾನವ ಸಂಪನ್ಮೂಲ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಎ.ಎಂ. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.ಪ್ರಮಾಣ ಪತ್ರ ವಿತರಣೆ :
ಪ್ರಸಕ್ತ ಸಾಲಿನ ಪ್ಲೇಸ್ಮೆಂಟ್ ನಲ್ಲಿ ಬರ್ಜರ್ ಪೇಂಟ್ಸ್, ಎನ್.ಜೆ. ಇನ್ವೆಸ್ಟಮೆಂಟ್ಸ್, ಕ್ಯಾಡ್ಮ್ಯಾಕ್ಸ್ ಹಾಗೂ ಡೇಟಾಲಾಜಿಕ್ಸ್ ನಂತಹ ಕಂಪನಿಗಳಲ್ಲಿ ವಾರ್ಷಿಕ ₹7 ಲಕ್ಷ ಹಾಗೂ ₹4.00 ಲಕ್ಷ ವಾರ್ಷಿಕ ಸರಾಸರಿ ಪ್ಯಾಕೇಜ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಅನೇಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.