ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗಾಗಿ ಭೂ ಸ್ವಾಧೀನ ಕೆಲಸ ಚುರುಕುಗೊಳಿಸುವಂತೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಪಂ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಅಭಿವೃದ್ಧಿ ಕೆಲಸಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 240 ಎಕರೆ ಭೂ ಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. 40 ಎಕರೆ ಭೂಮಿಗೆ ಪರಿಹಾರ ನೀಡಲು ಶೀಘ್ರವಾಗಿ ಕ್ರಮ ವಹಿಸುವಂತೆ ಹೇಳಿದರು.
ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಜಿಲ್ಲೆಯಲ್ಲಿ 393.85 ಕೋಟಿ ರು. ವೆಚ್ಚದಲ್ಲಿ 46 ಕಿ.ಮೀ. 12 ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ. ವೈಟ್ ಟಾಪಿಂಗ್ ಮಾಡುವುದರಿಂದ ರಸ್ತೆಯು ಹೆಚ್ಚು ವರ್ಷಗಳ ಕಾಲ ಬಳಕೆಗೆ ಬರಲಿದೆ ಎಂದು ಅವರು ತಿಳಿಸಿದರು.ಶಾಸಕ ತನ್ವೀರ್ ಸೇಠ್ ಮಾತನಾಡಿ, ವಿಮಾನ ನಿಲ್ದಾಣ ವಿಸ್ತರಣೆ ಮಾಡುವುದರಿಂದ ಮೈಸೂರು ನಗರ ಅಭಿವೃದ್ಧಿಯಾಗಲಿದೆ. ಐಟಿ ಕಂಪನಿಗಳ ಬೆಳವಣಿಗೆ ಹಾಗೂ ಕಾರ್ಗೋ ಸಿಸ್ಟಂ ಹೆಚ್ಚಳವಾಗಲಿದೆ. ರೋಡ್ ಟಾಪಿಂಗ್ ಮಾಡುವ ಮೊದಲು ಅಧಿಕಾರಿಗಳು ಶಾಸಕರೊಂದಿಗೆ ರಸ್ತೆಗಳ ವಿಸ್ತರಣೆ, ಯುಜಿಡಿ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಿ ನಂತರ ಕೆಲಸಗಳನ್ನು ಪ್ರಾರಂಭಿಸಬೇಕು ಎಂದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಲವಾರು ರಸ್ತೆಗಳು ದುರಸ್ತಿಪಡಿಸಬೇಕಿದ್ದು, ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಕೆ. ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮೊದಲಾದವರು ಇದ್ದರು.
ಜಿಲ್ಲೆಯಲ್ಲಿ ಹೊಸ ಫ್ಲೈಓವರ್, ಟನಲ್ ಗಳ ನಿರ್ಮಾಣ ಹೆಚ್ಚಳವಾಗುತ್ತಿದೆ. ಇದರಿಂದ ನಗರದ ಸೌಂದರ್ಯ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಪರ್ಯಾಯ ಚಿಂತನೆ ನಡೆಸಬೇಕಿದೆ.- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ನಾನಂತೂ ಸೇಫ್- ಸಚಿವ ಡಾ.ಎಚ್.ಸಿ. ಮಹದೇವಪ್ಪಕನ್ನಡಪ್ರಭ ವಾರ್ತೆ ಮೈಸೂರು
ಸಚಿವ ಸ್ಥಾನ ಯಾವಾಗ ಏನು ಅನ್ನೋದನ್ನ ನಾನು ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ, ನಾನಂತೂ ಸೇಫ್ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ನೀವು ಸಚಿವರಾಗಿಯೇ ಇರುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನಂತೂ ಸೇಫ್ ಎಂದು ಮಾರ್ಮಿಕವಾಗಿ ಉತ್ತರ ನೀಡಿದರು.
ನವೆಂಬರ್ ಕ್ರಾಂತಿ ಬಗ್ಗೆ ಚರ್ಚೆ ಬೇಡ ಅದಕ್ಕೆ ಫುಲ್ ಸ್ಟಾಪ್ ಇಟ್ಟುಬಿಡಿ. ಕ್ರಾಂತಿ ಏನೂ ನಡೆಯೋದಿಲ್ಲ. ಕ್ರಾಂತಿ ಎನ್ನೋದು ಕೇವಲ ಬ್ರಾಂತಿ ಅಷ್ಟೇ. ಯಾವಾಗ ಏನು ಆಗಬೇಕು ಎಂಬುದನ್ನು ನಿರ್ಧಾರ ಮಾಡೋದು ಹೈಕಮಾಂಡ್. ಹೈಕಮಾಂಡ್ ಯಾವಾಗ ಏನು ಹೇಳುತ್ತೋ ಯಾರಿಗೆ ಗೊತ್ತು. ಹೈಕಮಾಂಡ್ ಇದುವರೆಗೂ ಏನನ್ನೂ ಹೇಳಿಲ್ಲ. ಹೀಗಾಗಿ ಯಾವ ಕ್ರಾಂತಿಯೂ ಇಲ್ಲ. ಯಾರ್ಯಾರು ಯಾಕೆ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.ಅಧಿಕಾರ ಯಾರಪ್ಪನ ಮನೆ ಆಸ್ತಿ, ಎಂಎಲ್ಎ ಇದ್ದಾಗಲೂ ಕೆಲಸ ಮಾಡಬಹುದು, ಸಚಿವರಾದಾಗಲೂ ಕೆಲಸ ಮಾಡಬಹುದು. ನಾನು ಯಾವಾಗಲೂ ಯಾವುದಕ್ಕೂ ತಲೆ ಕೆಡಿಸಿಕೊಂಡವನಲ್ಲ ಎಂದರು.
ದಲಿತ ಸಮಾವೇಶ:ದಲಿತ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಒಂದು ಚಳವಳಿ. ಚಳವಳಿ ನಿರಂತರವಾಗಿ ನಡೆಯುತ್ತಿರುತ್ತದೆ. ಪಕ್ಷಕ್ಕೆ ಪೂರಕವಾದ ಚಟುವಟಿಕೆಗಳನ್ನ ನಡೆಸಲು ಅನುಮತಿ ಬೇಕಾಗಿಲ್ಲ. ಪಕ್ಷಕ್ಕೆ ವಿರುದ್ಧವಾದ ಸಮಾವೇಶವಾದದರೇ ಪಕ್ಷವೇ ಮಧ್ಯ ಪ್ರವೇಶ ಮಾಡುತ್ತದೆ. ದಲಿತ ಸಮಾವೇಶದ ರೂಪುರೇಷೆಗಳು ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು.
;Resize=(128,128))
;Resize=(128,128))