ಕಾಮಗಾರಿಗಳಿಗೆ ವೇಗ ನೀಡಿ ಗ್ಯಾರಂಟಿ ಯೋಜನೆ ತಲುಪಿಸಿ: ದೀಪಾ ಚೋಳನ್

| Published : Jan 21 2024, 01:32 AM IST

ಕಾಮಗಾರಿಗಳಿಗೆ ವೇಗ ನೀಡಿ ಗ್ಯಾರಂಟಿ ಯೋಜನೆ ತಲುಪಿಸಿ: ದೀಪಾ ಚೋಳನ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಆಯಾ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ, ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್ ಹೇಳಿದರು.

ಧಾರವಾಡ: ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ವೇಗ ನೀಡಿ, ಬರುವ ಮಾರ್ಚ್‌ದೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಪ್ರತಿ ಅರ್ಹ ಫಲಾನುಭವಿಗೆ ತಲುಪಿಸುವಲ್ಲಿ ಅಧಿಕಾರಿಗಳು ಖಾತ್ರಿ ಮಾಡಿಕೊಳ್ಳಬೇಕೆಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್ ಹೇಳಿದರು.

ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ವಿವಿಧ ಯೋಜನೆಗಳು, ಬರಗಾಲ ಪರಿಸ್ಥಿತಿ ಮತ್ತು ಖಾತ್ರಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಆಯಾ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ, ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದರು

ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು ಎಂದರು.

ಎಂಟು ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಂದಾಜು 1.89 ಲಕ್ಷ ಹೆಕ್ಟೆರ್ ಕೃಷಿ ಬೆಳೆ ಹಾಗೂ 0.22 ಲಕ್ಷ ಹೆಕ್ಟೆರನಷ್ಟು ತೊಟಗಾರಿಕೆ ಬೆಳೆ ಸೇರಿ ಒಟ್ಟು ಅಂದಾಜು 2.11 ಲಕ್ಷ ಹೆಕ್ಟೆರ್‌ದಷ್ಟು ಬೆಳೆ ಹಾನಿಯಾಗಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್‌ಗಳ ಮಾರ್ಗ ಸೂಚಿಯಂತೆ ₹212 ಕೋಟಿ ಇನ್ ಪುಟ್ ಸಬ್ಸಿಡಿ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಎಂಆರ್‌ಬಿಸಿ ಕಾಲುವೆ ಮುಖಾಂತರ ಕುಡಿಯುವ ನೀರಿನ ಕೆರೆ ತುಂಬಿಸಿಕೊಳ್ಳಲು ನವಿಲು ತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಕಳೆದ ನವೆಂಬರ್ 7 ರಿಂದ 16ರ ವರೆಗೂ ನೀರು ಬಿಡಲಾಗಿತ್ತು. ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಒಂದು ವೇಳೆ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ತಾಲೂಕುವಾರು ಟೆಂಡರ್ ಪ್ರಕ್ರಿಯೆ ಮಾಡಲಾಗುತ್ತಿದೆ. ಅಧಿಕಾರಿಗಳು ಜನರ ಮಧ್ಯದಲ್ಲಿದ್ದು, ಅಹವಾಲು ಮತ್ತು ಬೇಡಿಕೆಗಳಿಗೆ ಸ್ಪಂದಿಸಬೇಕೆಂದರು.

ಬರಕ್ಕೆ ₹12 ಕೋಟಿ: ಜಿಲ್ಲೆಗೆ ಬರ ಪರಿಹಾರಕ್ಕಾಗಿ ₹12ಕೋಟಿ ಬಿಡುಗಡೆ ಮಾಡಿದೆ. ಪ್ರತಿ ತಾಲೂಕಿಗೆ ₹50 ಲಕ್ಷ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣಾ ಪಿಡಿ ಖಾತೆಯಲ್ಲಿ ₹3.28 ಕೋಟಿ ಅನುದಾನ ಮತ್ತು ತಹಸೀಲ್ದಾರರ ಖಾತೆಯಲ್ಲಿ ₹1.99 ಕೋಟಿ ಅನುದಾನ ಸೇರಿದಂತೆ ಒಟ್ಟು ₹6.27 ಕೋಟಿ ಬರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಲಭ್ಯವಿದೆ. ಅಗತ್ಯವಿದ್ದಲ್ಲಿ ಬಳಸಿಕೊಳ್ಳುವಂತೆ ನಿರ್ದೇಶಿಸಿದರು.

ಪ್ರಭಾರ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ., ಬಿಆರ್‌ಟಿಎಸ್ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಭಜಂತ್ರಿ ಮತ್ತು ಕೆಯುಐಡಿಎಫ್‌ಸಿಯ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ಕಾರ್ಯನಿರ್ವಾಹಕ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಇದ್ದರು.

ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.