ಸಾರಾಂಶ
ಸೊರಬ : ಕ್ಷೇತ್ರದ ಶಕ್ತಿಪೀಠ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಅಭಿವೃದ್ಧಿಗೆ ಎದುರಾಗಿರುವ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿ, ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮವಹಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂದಿರದ ಆವರಣದಲ್ಲಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಮಿತಿ, ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿರುವ ೯ನೇ ವರ್ಷದ ಶ್ರೀ ರೇಣುಕಾಂಬದೇವಿಯ ದಸರಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ರೇಣುಕಾಂಬ ದೇವಿಗೆ ನಾಡಿನ ಎಲ್ಲೆಡೆ ಲಕ್ಷಾಂತರ ಭಕ್ತರಿದ್ದಾರೆ. ದೇವಸ್ಥಾನವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಜೊತೆಗೆ ಮುಜರಾಯಿ ಇಲಾಖೆ ಯಿಂದ ನಿರ್ವಹಣೆ ಮಾಡಲಾಗುತ್ತಿದೆ. ದೇವಸ್ಥಾನದ ಸುತ್ತ ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹಿನ್ನಡೆಯಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಇರುವ ತಾಂತ್ರಿಕ ಸಮಸ್ಯೆಗಳ ಬಗೆಹರಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರವೇ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಾ ಪ್ರಸಾದ್ ಮಾತನಾಡಿ, ಹೋಬಳಿ ಕೇಂದ್ರವಾದ ಚಂದ್ರಗುತ್ತಿ ಗ್ರಾಮದಲ್ಲಿ ರಸ್ತೆಗಳು ಕಿರಿದಾಗಿದ್ದು, ಅಗಲೀಕರಣವಾಗ ಬೇಕಿದೆ. ಕೆಪಿಎಸ್ ಶಾಲೆ, ಪದವಿಪೂರ್ವ ಕಾಲೇಜು ನಿರ್ಮಿಸಿದರೆ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಡಾ.ಆರ್.ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ಸಮಿತಿಯು ಕಳೆದ ೯ ವರ್ಷಗಳಿಂದ ದೇವಿಯ ಆರಾಧನೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೈಭವದಿಂದ ಆಚರಿಸಲಾಗುತ್ತಿದೆ. ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ, ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಉಪಾಧ್ಯಕ್ಷ ಎಂ.ಬಿ.ರೇಣುಕಾ ಪ್ರಸಾದ್, ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯರಾದ ಎನ್.ಜಿ. ನಾಗರಾಜ್, ಸುನೀಲ್ ಗೌಡ, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಪ್ರಜ್ವಲ್, ಸಮಿತಿಯ ವಸಂತ ಶೇಟ್, ಪ್ರಮುಖರಾದ ಜಯಶೀಲ ಗೌಡ, ಸುಧಾಕರ ನಾಯ್ಕ್, ಮಂಜುನಾಥ ಶಣೈ, ರವಿ ಚನ್ನಪಟ್ಟಣ, ಮೋಹನ್ ಹೊಳೆಮರೂರು, ಷಣ್ಮುಖಪ್ಪ, ರವಿ ಕುಮಾರ್, ಪ್ರದೀಪ ಬಾಡದಬೈಲು, ದರ್ಶನ್ ಚಿಕ್ಕಮಾಕೊಪ್ಪ, ವಿನಾಯಕ ಹೆಗಡೆ, ನಾಗೇಶ್ ಕಮರೂರು, ಪಿ.ಜೆ.ಗಣಪತಿ, ಗುರು ಬರದವಳ್ಳಿ, ಚಂದ್ರಕಾಂತ, ಕೃಷ್ಣಮೂರ್ತಿ, ಗಣೇಶ ಮರಡಿ, ಗಣಪತಿ ಸಂಗೇರ್ ಸೇರಿದಂತೆ ದಸರಾ ಉತ್ಸವ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.