ಸರ್ಕಾರಿ ಶಾಲೆಗೆ ಲಕ್ಷಾಂತರ ಖರ್ಚು ಮಾಡಿ ಬಣ್ಣ

| Published : Apr 02 2024, 01:06 AM IST

ಸಾರಾಂಶ

ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ರಾಮನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯೇ ಸಾಕ್ಷಿ.

ಜೋಯಿಡಾ: ಈ ಶಾಲೆಯ ಎಸ್‌ಡಿಎಂಸಿಯವರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳೆಲ್ಲ ಸೇರಿ ಸುಮಾರು ಮೂರುವರೆ ಲಕ್ಷ ಹಣ ನೀಡಿ ಎಲ್ಲ ಕೊಠಡಿಗಳನ್ನು ಶೃಂಗರಿಸಿದ್ದಾರೆ.

ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ರಾಮನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯೇ ಸಾಕ್ಷಿ. ಇಲ್ಲಿನ ಪ್ರಾಥಮಿಕ ಶಾಲೆ ಕಳೆದ ಒಂದು ದಶಕದಿಂದ ಸುಣ್ಣ ಬಣ್ಣ ಕಂಡಿರಲಿಲ್ಲ. ಇಲ್ಲಿನ ಈ ಮಾದರಿ ಶಾಲೆಯಲ್ಲಿ ಸುಮಾರು 20 ಕೊಠಡಿಗಳಿದ್ದು, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಸುಣ್ಣ ಬಣ್ಣಕ್ಕೆ ತಗಲುವ ಖರ್ಚು ಲಕ್ಷಾಂತರ ರುಪಾಯಿ ಆಗುತ್ತಿರುವ ಕಾರಣ ಯಾರೂ ಧೈರ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಆದರೆ ಈಗಿನ ಎಸ್‌ಡಿಎಂಸಿಯವರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳೆಲ್ಲ ಸೇರಿ ಸುಮಾರು ಮೂರುವರೆ ಲಕ್ಷ ಹಣ ನೀಡಿ ಎಲ್ಲ ಕೊಠಡಿಗಳನ್ನು ಶೃಂಗರಿಸಿದ್ದಾರೆ. ಇದರಿಂದ ಶಾಲೆ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಶಿಕ್ಷಕರು ಖುಷಿಯಿಂದ ಶಾಲೆಯಲ್ಲಿ ಓಡಾಡಿ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಾ ದೇಸಾಯಿ ಹೇಳುವಂತೆ ಕಳೆದ ಹಲವಾರು ವರ್ಷಗಳಿಂದ ಶಾಲೆಗೆ ಅಲಂಕಾರವಿಲ್ಲದೆ ಕಳೆಗುಂದಿತ್ತು. ಈಗ ಎಲ್ಲರ ಸಹಕಾರದಿಂದ ಶಾಲೆಯ ಅಲಂಕಾರ ರಂಗೇರಿದ್ದು, ಓಡಾಡಲು ಖುಷಿಯಾಗುತ್ತಿದೆ. ಈಗ ನಮಗೆ ಸಾರ್ಥಕ ಭಾವನೆ ಬಂದಿದೆ. ಮಕ್ಕಳೂ ಖುಷಿಯಿಂದ ಅಭ್ಯಾಸ ಮಾಡುತ್ತಿದ್ದಾರೆ ಎನ್ನುತ್ತಾರೆ.

ಎಲ್ಲ ಶಾಲೆಗಳ ಆಡಳಿತ ಮಂಡಳಿಯವರಿಗೂ ರಾಮನಗರದ ಶಾಲೆ ಪಾಠ ಹೇಳಿದಂತಿದೆ.