ಕಣ್ಣಿಗೆ ಕಾಣದ ಪರಮಸತ್ಯವೊಂದಿದೆ ಎನ್ನುವುದನ್ನು ಭಾರತೀಯ ಚಿಂತನೆಯ ಮೌಲ್ಯದ ಕುರಿತಾಗಿ ಜಗತ್ತಿಗೆ ಬಹುದೊಡ್ಡ ಸಂದೇಶವನ್ನು ನೀಡಿದ್ದಾರೆ. ಅವನೇ ಭಗವಂತ.

ಯಲ್ಲಾಪುರ: ಎಲ್ಲ ಉತ್ಸವಗಳೂ ದೇವತಾ ಆರಾಧನೆ. ಅದರಲ್ಲೂ ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವಕ್ಕೆ ಆಧ್ಯಾತ್ಮಿಕ ಶಕ್ತಿ ಇದೆ. ನಮ್ಮ ಮಕ್ಕಳನ್ನು ದೇವಸ್ಥಾನ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ತರಬೇಕು. ಅಂದಾಗ ಮಾತ್ರ ನಮ್ಮ ಮೌಲ್ಯ, ಸಂಸ್ಕೃತಿಯ ಅರಿವು ಮುಂದುವರಿಯಲು ಸಾಧ್ಯ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಮಂಗಳವಾರ ಪಟ್ಟಣದ ರವೀಂದ್ರನಗರದ ಶಕ್ತಿಗಣಪತಿ ದೇವಸ್ಥಾನದಲ್ಲಿ ಸ್ಪಂದನ ಯುವಕ ಸಂಘ, ಆದರ್ಶ ಮಹಿಳಾ ಮಂಡಳದ ಆಶ್ರಯದಲ್ಲಿ ೫ನೇ ದಿನದ ಕಾರ್ತೀಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಕಣ್ಣಿಗೆ ಕಾಣದ ಪರಮ ಸತ್ಯವೊಂದಿದೆ ಎಂದು ವಿವೇಕಾನಂದರು ಹೇಳಿದ್ದಾರೆ. ಅಮೆರಿಕದಲ್ಲಿ ನಡೆದ ಬೃಹತ್ ಸಭೆಯಲ್ಲಿ ನೀರು ಮೇಲ್ಮುಖವಾಗಿ ಹೋಗುತ್ತದೆ ಎನ್ನುವುದನ್ನು ಪ್ರತಿಪಾದಿಸಿದಾಗ ಅಲ್ಲಿನ ಮಹಾನ್ ಪಂಡಿತರೆಲ್ಲ ವಿಸ್ಮಯಗೊಂಡರು. ಮಳೆಯಿಂದ ಬಂದ ನೀರು ಸಮುದ್ರ ಸೇರಿ ಅಲೆಯಾಗಿ ಮೇಲೆ ಹೋಗುತ್ತದೆ. ಅದು ಕಾಣುವುದಿಲ್ಲ. ಪುನಃ ಮಳೆ ಬೀಳುತ್ತದೆ. ಅದು ಹೇಗೆ ಸತ್ಯವೋ, ಹಾಗೆಯೇ ಕಣ್ಣಿಗೆ ಕಾಣದ ಪರಮಸತ್ಯವೊಂದಿದೆ ಎನ್ನುವುದನ್ನು ಭಾರತೀಯ ಚಿಂತನೆಯ ಮೌಲ್ಯದ ಕುರಿತಾಗಿ ಜಗತ್ತಿಗೆ ಬಹುದೊಡ್ಡ ಸಂದೇಶವನ್ನು ನೀಡಿದ್ದಾರೆ. ಅವನೇ ಭಗವಂತ. ಅಂತಹ ಮಹಾನ್ ಭಾರತ ನಮ್ಮದು. ಆ ನೆಲೆಯಲ್ಲಿ ಶಕ್ತಿಗಣಪತಿ ದೇವಸ್ಥಾನದಲ್ಲಿ ಒಂದು ಆಧ್ಯಾತ್ಮಿಕ ಲೋಕವನ್ನು ನಿರ್ಮಿಸಲಾಗಿದೆ. ಇದೊಂದು ಸುಧರ್ಮ ಸಭೆ ಎನ್ನಬಹುದು ಎಂದರು.

ಅ.ಭಾ.ಸಾ.ಪ. ತಾಲೂಕಾಧ್ಯಕ್ಷ ಜಿ.ಎಸ್. ಗಾಂವ್ಕರ, ಪತ್ರಕರ್ತ ನಾಗರಾಜ ಮದ್ಗುಣಿ, ಯಕ್ಷಗಾನ ಭಾಗವತರಾದ ಚಿಂತನಾ ಹೆಗಡೆ ಶುಭ ಹಾರೈಸಿದರು. ದಾನಿಗಳಾದ ಮಹಾಬಲೇಶ್ವರ ಭಟ್ಟ ಹಲಸಿನಬೀಳು, ಸುಬ್ರಾಯ ಭಟ್ಟ ಹೊಸ್ಮನೆ ಅವರನ್ನು ಸನ್ಮಾನಿಸಲಾಯಿತು. ವಿನುತಾ ಹೆಗಡೆ, ಗಿರಿಜಾ ಗಾಂವ್ಕರ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ಹೆಗಡೆ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.

ನಂತರ ನಡೆದ ಯಕ್ಷಗಾನ ಗಾನವೈಭವ ಕಾರ್ಯಕ್ರಮದಲ್ಲಿ ಭಾಗವತರಾಗಿ ಚಿಂತನಾ ಹೆಗಡೆ ಮಾಳ್ಕೋಡ ಜನಮೆಚ್ಚುಗೆಗೆ ಪಾತ್ರವಾದರು. ಪರಮೇಶ್ವರ ಭಂಡಾರಿ ಮೃದಂಗದಲ್ಲಿ ಹಾಗೂ ದರ್ಶನ ಮುಗ್ವಾ ಚಂಡೆಯಲ್ಲಿ ಸಹಕರಿಸಿದರು.