ಆಧ್ಯಾತ್ಮ ಬದಲಾಗದು: ಡಾ. ವಿಘ್ನೇಶ್ವರ ಭಟ್ಟ

| Published : Oct 28 2025, 12:33 AM IST

ಸಾರಾಂಶ

ವಿಜ್ಞಾನ ನಿರಂತರ ಬದಲಾಗಬಹುದು. ಆದರೆ ಆಧ್ಯಾತ್ಮ ಬದಲಾಗದು. ಜಗತ್ತಿಗೇ ಆಧ್ಯಾತ್ಮ ಚಿಂತನೆ, ಸಂಸ್ಕೃತಿಯನ್ನು ನೀಡಿದ ದೇಶ ನಮ್ಮದು.

ಶಕ್ತಿಗಣಪತಿ ದೇವಸ್ಥಾನದ ಕಾರ್ತಿಕೋತ್ಸವದ ೨ನೇ ದಿನದ ದೀಪೋತ್ಸವದಲ್ಲಿ ಋಷಿ ಗುರುಕುಲದ ಮುಖ್ಯಸ್ಥ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ವಿಜ್ಞಾನ ನಿರಂತರ ಬದಲಾಗಬಹುದು. ಆದರೆ ಆಧ್ಯಾತ್ಮ ಬದಲಾಗದು. ಜಗತ್ತಿಗೇ ಆಧ್ಯಾತ್ಮ ಚಿಂತನೆ, ಸಂಸ್ಕೃತಿಯನ್ನು ನೀಡಿದ ದೇಶ ನಮ್ಮದು. ನಮ್ಮ ಋಷಿಮುನಿಗಳು ಅಗ್ನಿಯ ಆರಾಧನೆಯನ್ನು ಪ್ರಧಾನವಾಗಿ ನೀಡಿದ್ದಾರೆ. ಹಾಗಾಗಿ ನಾವು ಪ್ರತಿಯೊಂದಕ್ಕೂ ಅಗ್ನಿಯ ಆರಾಧನೆ ಮಾಡುವ ಪರಂಪರೆಯಿಂದ ಬಂದಿದ್ದೇವೆ ಎಂದು ಋಷಿ ಗುರುಕುಲದ ಮುಖ್ಯಸ್ಥ ಡಾ. ವಿಘ್ನೇಶ್ವರ ಭಟ್ಟ ಹೇಳಿದರು.

ಪಟ್ಟಣದ ಶ್ರೀ ಶಕ್ತಿಗಣಪತಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ೨ನೇ ದಿನದಂದು ದೀಪೋತ್ಸವದ ಹಿಂದಿನ ಆಧ್ಯಾತ್ಮಿಕ ದೃಷ್ಟಿಕೋನದ ಕುರಿತು ಮಾತನಾಡಿದರು.

ಭಾರತ ಅಗ್ನಿ ಆರಾಧನೆ ಮಾಡಿಕೊಂಡು ಬಂದ ದೇಶ. ದೀಪಾರಾಧನೆ ಕಾರ್ತಿಕ ಮಾಸದಲ್ಲಿ ಮಹತ್ವ ಎಂಬುದನ್ನು ನಮ್ಮ ಪ್ರಾಚೀನರು ಕಂಡುಕೊಂಡಿದ್ದಾರೆ. ನೀರು, ವಾಯು, ಆಕಾಶ, ಭೂಮಿ ಎಲ್ಲವೂ ಮಾಲಿನ್ಯಗೊಳ್ಳಬಹುದು. ಆದರೆ ಅಗ್ನಿ ಎಂದಿಗೂ ಮಲಿನಗೊಳ್ಳುವುದಿಲ್ಲ. ಅಂತಹ ಅಗ್ನಿಯ ಆರಾಧಕರು ನಾವು. ನಮ್ಮಲ್ಲಿ ಕರ್ಮ ಎಂಬ ದೀಪವಿರುವವರೆಗೆ ಮಾತ್ರ ಉಳಿಯಬಹುದು. ದೀಪ ಜ್ಞಾನದ ಸಂಕೇತ. ಶ್ರದ್ಧಾಭಕ್ತಿಯಿಂದ ನಾವು ಆಧ್ಯಾತ್ಮಿಕ ತತ್ವದಲ್ಲಿ ಮುನ್ನಡೆದರೆ ಶ್ರೇಯಸ್ಸನ್ನು ಪಡೆಯಬಹುದು. ಜ್ಞಾನಕ್ಕೆ ಸದೃಶವಾದುದು ಜಗತ್ತಿನಲ್ಲಿ ಇನ್ನೊಂದಿಲ್ಲ. ನಮ್ಮ ಜೀವನವನ್ನು ಗಣಪತಿ ತತ್ವದಡಿಯಲ್ಲಿ ನಾವು ಸಾಗಿದಾಗ ರಾಗದ್ವೇಷದಿಂದ ಮುಕ್ತರಾಗಬಹುದು. ತೀರ್ಥ ಮತ್ತು ಅಗ್ನಿಯನ್ನು ಶುದ್ಧಿಗೊಳಿಸುವ ಅಗತ್ಯವಿಲ್ಲ. ಮನಸ್ಸು ಬದಲಾಗಬಹುದೇ ವಿನಃ ಜಗತ್ತು ಬದಲಾಗುವುದಿಲ್ಲ. ಮನೆಯಲ್ಲಿ ದೀಪ ಹಚ್ಚುವ ಸಂಪ್ರದಾಯ ಕೂಡ ಮನೆಯ ಶುದ್ಧಿಗಾಗಿಯೇ. ಅದು ಆಧ್ಯಾತ್ಮದ ಶಕ್ತಿಯಾಗಿದೆ ಎಂದರು.

ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ಸಾಮಾಜಿಕ ಕಾರ್ಯಕರ್ತರಾದ ಸಿ.ಜಿ. ಹೆಗಡೆ, ರಾಮಕೃಷ್ಣ ಭಟ್ಟ ನೆಲೆಮನೆ, ಸಾಂದರ್ಭಿಕ ಮಾತನಾಡಿದರು. ಮಂಗಲಾ ಭಾಗ್ವತ ಸ್ವಾಗತಿಸಿದರು. ಸಿ.ಎಸ್. ಹೆಗಡೆ ನಿರ್ವಹಿಸಿ, ವಂದಿಸಿದರು.