ಸಮಾಜದಲ್ಲಿ ಸಾಮರಸ್ಯ ಸಾಧಿಸಲು ಆಧ್ಯಾತ್ಮಿಕತೆ ಬಹಳ ಸಹಕಾರಿಯಾಗಿದೆ. ಈ ಅಧ್ಯಾತ್ಮದ ಉನ್ನತಿಗೆ ಭಗವಂತನನ್ನು ನಿತ್ಯ ಸ್ಮರಿಸಬೇಕು. ಇವುಗಳ ಮೂಲಕ ಕರ್ಮ ನಾಶ ಮಾಡಿಕೊಂಡು ಪುಣ್ಯ ಸಂಪಾದನೆಗೆ ಒತ್ತು ನೀಡಬೇಕು.
ಕುಂದಗೋಳ:ಅಹಿಂಸೆ, ಸಂಯಮ, ತಪ, ಇಂದ್ರಿಯಗಳ ಮೇಲೆ ನಿಗ್ರಹ ಸಾಧಿಸಿದರೆ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಇದನ್ನು ಪರಿಪಾಲನೆ ಜತೆಗೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆತ್ಮ ಉನ್ನತಿಗೆ ಶ್ರಮಿಸಬೇಕು ಎಂದು ಸೋಂದಾ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಶ್ರೀಗಳು ಕರೆ ನೀಡಿದರು.
ತಾಲೂಕಿನ ಹರಲಾಪೂರ ಗ್ರಾಮದಲ್ಲಿ ನಡೆದ ಮುನಿಶ್ರೀ ಸುಧರ್ಮಸಾಗರರ 33ನೇ ಪುಣ್ಯತಿಥಿ ಅಂಗವಾಗಿ ಪೂಜ್ಯರಿಗೆ ವಿನಯಾಂಜಲಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮರಸ್ಯ ಸಾಧಿಸಲು ಆಧ್ಯಾತ್ಮಿಕತೆ ಬಹಳ ಸಹಕಾರಿಯಾಗಿದೆ. ಈ ಅಧ್ಯಾತ್ಮದ ಉನ್ನತಿಗೆ ಭಗವಂತನನ್ನು ನಿತ್ಯ ಸ್ಮರಿಸಬೇಕು. ಇವುಗಳ ಮೂಲಕ ಕರ್ಮ ನಾಶ ಮಾಡಿಕೊಂಡು ಪುಣ್ಯ ಸಂಪಾದನೆಗೆ ಒತ್ತು ನೀಡಬೇಕು ಎಂದರು.ಪ್ರತಿಯೊಬ್ಬ ಮನುಷ್ಯ ತನ್ನ ಜೀವನವನ್ನು ಸುಖಮಯವಾಗಿಸಲು ಹಾಗೂ ನೆಮ್ಮದಿಯಿಂದ ಬದುಕಲು ಧಾರ್ಮಿಕ ಆಚರಣೆ ಮಾಡುವುದು ಬಹಳ ಮುಖ್ಯವಾಗಿದೆ. ತನ್ಮೂಲಕ ಧರ್ಮಾಚರಣೆಯಿಂದ ಸಮಾಜದ ಉನ್ನತೀಕರಣವೂ ಸಾಧ್ಯ ಎಂದೂ ಶ್ರೀಗಳು ನುಡಿದರು.ಸಮುದಾಯ ಭವನ ಶೀಘ್ರದಲ್ಲಿ ನಿರ್ಮಾಣಗೊಂಡು ಸಾಮಾಜಿಕ ಚಟುವಟಿಕೆಗಳಿಗೆ ಸಿದ್ಧಗೊಳ್ಳಲಿ. ನಿಮ್ಮೆಲ್ಲರ ಕನಸಿನಂತೆ ಈ ಸಮುದಾಯ ಭವನದ ಸತ್ಕಾರ್ಯಗಳಿಗೆ ಸದ್ಬಳಕೆಯಾಗಲಿ ಎಂದು ಹಾರೈಸಿ ಹರ್ಲಾಪುರ ಯುವಕ ಮಂಡಳದ ಸಂಘಟನೆ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಮುನಿಶ್ರೀ ಸುಧರ್ಮಸಾಗರ ಗುರುಕುಲದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಸಮುದಾಯ ಭವನಗಳು ವೈಯಕ್ತಿಕ ಕಾರ್ಯಗಳಿಗೆ ಉಪಯೋಗವಾಗದೆ ಇಂತಹ ಧಾರ್ಮಿಕ ಕಾರ್ಯಗಳಿಗೂ ಉಪಯೋಗವಾಗಬೇಕು. ಇದರಿಂದ ಆ ಸಮುದಾಯ ಭವನ ನಿರ್ಮಿಸಿದ್ದಕ್ಕೂ ಸಾರ್ಥಕತೆ ಬರಲಿದೆ ಎಂದು ಹೇಳಿದರು.ಸರ್ಕಾರದ ಹಲವಾರು ಅನುದಾನದಲ್ಲಿ ಕ್ಷೇತ್ರದಲ್ಲಿ ಸಮುದಾಯ ಭವನಗಳು ನಿರ್ಮಾಣಗೊಂಡಿವೆ. ಅವೆಲ್ಲವೂ ಈಗ ಧಾರ್ಮಿಕ, ಸಭೆ, ಜಾತ್ರೆ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನಗಳಾಗುತ್ತಿವೆ. ಅದರಂತೆಯೇ ಇಲ್ಲಿನ ಭವನ ಕೂಡ ಸದ್ಬಳಕೆಯಾಗಲಿ ಎಂದ ಆಶಿಸಿದರು.ಆರಂಭದಲ್ಲಿ ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರರಿಗೆ ಮತ್ತು ಭಗವಾನ್ 1008 ಆದಿನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, ಮುನಿಶ್ರೀ ಸುಧರ್ಮಸಾಗರ ಮಹಾರಾಜರ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹರ್ಲಾಪುರ ಜೈನ ಸೇವಾ ಸಂಘದ ಅಧ್ಯಕ್ಷ ವಿದ್ಯಾಧರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ನ್ಯಾಯವಾದಿ ಅಶೋಕ ಪಾಟೀಲ, ರೋಹನ್ ಪಾಟೀಲ್ ಹಾಗೂ ಸುಭಾಷ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶಾಂತರಾಜ ಮಲ್ಲಸಮುದ್ರ ಮುನಿಶ್ರೀ ಸುಧರ್ಮಸಾಗರರ ಕುರಿತು ವಿವರಿಸಿದರು. ಡಾ. ಜಿನದತ್ತ ಹಡಗಲಿ ಅವರು ಧರ್ಮ ಕಾರ್ಯದಲ್ಲಿ ದಾನದ ಮಹತ್ವ ಕುರಿತಾಗಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಪದ್ಮಲತಾ ನಿರಂಜನಕುಮಾರ, ಬಾಹುಬಲಿ ಹಚ್ಚಿಬಟ್ಟಿ, ಅಜಿತ್ ಪಾಟೀಲ್, ದೇವೇಂದ್ರ ಕಾಗೇನವರ, ನವೀನ ಜೈನ ಪಾಟೀಲ್, ಶ್ರೀಮಂದರ ಬಸ್ತಿ ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಮಾಜಿ ಸೈನಿಕ ವರ್ಧಮಾನ ಪಾಟೀಲ್, ನಿವೃತ್ತ ಮುಖ್ಯೋಪಾಧ್ಯಯರಾದ ನಾಗಪ್ಪ ಓಂ. ಹಡಗಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಂತಲಾ ಮಹಿಳಾ ಮಂಡಲದಿಂದ ಪ್ರಾರ್ಥಿಸಿದರೆ ಗೀತಾ ರೋಹನ್ ಪಾಟೀಲ ಸ್ವಾಗತಿಸಿದರು. ರೋಹನ್ ಪಾಟೀಲ ವಂದಿಸಿದರು. ಪ್ರವೀಣ ಸಿದ್ದಣ್ಣವರ ಕಾರ್ಯಕ್ರಮ ನಿರೂಪಿಸಿದರು.