ಜೀವನದ ಶಾಂತಿ ಸಮೃದ್ಧಿಗೆ ಅಧ್ಯಾತ್ಮ ಅಗತ್ಯ

| Published : Feb 10 2025, 01:47 AM IST

ಸಾರಾಂಶ

ಬದುಕಿನ ಉನ್ನತಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅವಶ್ಯಕ. ಮೌಲ್ಯಾಧಾರಿತ ಬದುಕಿಗೆ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅಗತ್ಯ. ಬಾಳೆಗೊಂದು ಗೊನೆಯಿರುವಂತೆ ಮನುಷ್ಯನ ಜೀವನ ಸಮೃದ್ಧಿಗೆ ಹಾಗೂ ಶಾಂತಿಯ ಬದುಕಿಗೆ ಆಧ್ಯಾತ್ಮದ ಅರಿವು ಅಗತ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತಿಪಟೂರು

ಬದುಕಿನ ಉನ್ನತಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅವಶ್ಯಕ. ಮೌಲ್ಯಾಧಾರಿತ ಬದುಕಿಗೆ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅಗತ್ಯ. ಬಾಳೆಗೊಂದು ಗೊನೆಯಿರುವಂತೆ ಮನುಷ್ಯನ ಜೀವನ ಸಮೃದ್ಧಿಗೆ ಹಾಗೂ ಶಾಂತಿಯ ಬದುಕಿಗೆ ಆಧ್ಯಾತ್ಮದ ಅರಿವು ಅಗತ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ತಾಲೂಕಿನ ಈಚನೂರು ಗ್ರಾಮದಲ್ಲಿ ಶ್ರೀ ರುದ್ರೇಶ್ವರ ನೂತನ ಶಿಲಾ ದೇಗುಲ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಹೊನ್ನು ಹೆಣ್ಣು ಮಣ್ಣಿಗಾಗಿ ಸತ್ತವರು ಕೋಟಿ ಕೋಟಿ ಜನ. ಆದರೆ ಭಗವಂತನಿಗಾಗಿ ಸತ್ತವರು ಯಾರೂ ಇಲ್ಲ. ಅಧಿಕಾರ ಕೀರ್ತಿ ಧನ ಕನಕ ವಸ್ತು ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಮಡಿದವರೆಷ್ಟೋ ಜನ. ಅವರೆಲ್ಲರೂ ಕಾಲ ಗರ್ಭದಲ್ಲಿ ಅಡಗಿ ಹೋಗಿದ್ದಾರೆ. ಜಗದ ಜನತೆಗೆ ಬೆಳಕು ತೋರಿದ ಆದರ್ಶ ಬದುಕು ಸಾಗಿಸಿದ ಆಚಾರ್ಯರ, ಋಷಿ ಮುನಿಗಳ ಮಾತುಗಳನ್ನು ಯಾರೂ ಮರೆಯುವುದಿಲ್ಲ. ಭೌತಿಕ ಬದುಕಿನ ಸಂಪತ್ತಿನಲ್ಲಿ ಬಾಳುವ ಮನುಷ್ಯರಿಗೆ ಗುಣವಂತರ ಗುಣಾದರ್ಶಗಳು ಕಾಣುವುದಿಲ್ಲ. ಸುಖದ ದಾರಿಗೆ ಧರ್ಮಾಚರಣೆ ಮೂಲವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ ವಾಣಿ ಸತ್ಯವಾದುದು. ಈಚನೂರು ಪ್ರಾಚೀನ ಶ್ರೀ ರುದ್ರೇಶ್ವರ ದೇವಸ್ಥಾನವನ್ನು ಶಿಲಾಮಯದಿಂದ ನಿರ್ಮಿಸಿ ಸ್ವಾಮಿ ಪ್ರತಿಷ್ಠಾಪನೆ ಮಾಡುತ್ತಿರುವುದು ತಮಗೆ ಅಪಾರ ಸಂತೋಷ ತಂದಿದ್ದು ಇದಕ್ಕಾಗಿ ಶ್ರಮಿಸಿದ ಎಲ್ಲ ಭಕ್ತ ಸಂಕುಲಕ್ಕೆ ಒಳ್ಳೆಯದಾಗಲಿ ಎಂದರು.ಸಾನ್ನಿಧ್ಯ ವಹಿಸಿದ ಶ್ರೀ ಕೇದಾರ ಜಗದ್ಗುರು ರಾವಲ್ ಶ್ರೀ ಭೀಮಾಶಂಕರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಬೇಕು. ಮೌಢ್ಯತೆಯ ಮಾರಿ ಮನುಷ್ಯನನ್ನು ಆವರಿಸಿ ಸತ್ಯದ ಮಾರ್ಗ ಕಾಣದಂತಾಗಿದೆ. ಅರಿವಿನ ಕಣ್ಣು ತೆರೆಸಲು ಧರ್ಮ ಬೇಕು ಹಾಗೂ ಗುರು ಬೇಕು ಎಂಬುದನ್ನರಿತು ಬಾಳಬೇಕೆಂದರು.ನುಗ್ಗೇಹಳ್ಳಿ ಡಾ. ಮಹೇಶ್ವರ ಶಿವಾಚಾರ್ಯರು ಮಾತನಾಡಿ ದುರ್ಮಾರ್ಗಕ್ಕೆ ಹಲವು ದಾರಿ. ಆದರೆ ಸನ್ಮಾರ್ಗಕ್ಕೆ ಇರುವುದೊಂದೇ ದಾರಿ. ಸುಖ ಶಾಂತಿ ಬದುಕಿಗಾಗಿ ಗುರುವಿನ ಮಾರ್ಗದರ್ಶನ ಮುಖ್ಯವೆಂದರು. ಶಾಸಕ ಷಡಕ್ಷರಿಯವರು ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಜೀವಗಳು ಎಷ್ಟೋ ಹೇಳಲಾಗದು. ಭೌತಿಕ ಸಂಪನ್ಮೂಲಗಳು ಮನುಷ್ಯನಿಗೆ ಶಾಂತಿ ಸಂತೃಪ್ತಿ ತಂದು ಕೊಡಲಾರವು. ಸಿರಿ ಸಂಪತ್ತಿನ ಜೊತೆಗೆ ಆಧ್ಯಾತ್ಮದ ಚಿಂತನೆಗಳು ಅವಶ್ಯಕವೆಂದರು. ಈ ಧರ್ಮ ಸಮಾರಂಭದಲ್ಲಿ ದೊಡ್ಡಗುಣಿ ರೇವಣಸಿದ್ಧೇಶ್ವರ ಶ್ರೀಗಳು, ಹೊನ್ನವಳ್ಳಿ ಶಿವಪ್ರಕಾಶ ಶ್ರೀಗಳು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶ್ರೀಗಳು, ಅಂಬಲದೇವರಹಳ್ಳಿ ಮಠದ ಉಜ್ಜಯನೀಶ್ವರ ಶ್ರೀಗಳು, ಕುಪ್ಪೂರು ತೇಜೇಶ್ವರ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.ಎನ್.ಎಸ್. ಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು. ರುದ್ರೇಶ್ವರ ಮಹಿಳಾ ಸಮಾಜದವರಿಂದ ಪ್ರಾರ್ಥನೆ, ಮಠದ ವೈದಿಕ ವೃಂದದವರಿಂದ ವೇದಘೋಷ, ಈಚನೂರಿನ ಪುರುಷೋತ್ತಮ ಇವರಿಂದ ಸ್ವಾಗತ ಜರುಗಿತು. ನ್ಯಾಯವಾದಿಗಳಾದ ತಿಪಟೂರಿನ ಶೋಭ ಜಯದೇವ ಹಾಗೂ ಅರಸೀಕೆರೆ ಲೋಕೇಶ್ ನಿರೂಪಿಸಿದರು. ಸಮಾಜದ ಅಧ್ಯಕ್ಷ ಬಿ. ನಂದೀಶ ವಂದನಾರ್ಪಣೆ ಸಲ್ಲಿಸಿದರು.ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಹಾಗೂ ಶ್ರೀ ಕೇದಾರ ಜಗದ್ಗುರುಗಳವರ ಭವ್ಯ ಸಾರೋಟ ಉತ್ಸವ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು. ಆಗಮಿಸಿದ ಸಕಲ ಸದ್ಭಕ್ತರಿಗೂ ಅನ್ನ ದಾಸೋಹ ಜರುಗಿತು. ಉತ್ಸವದಲ್ಲಿ ವೀರಗಾಸೆ ಕಲಾವಿದರು, ಪುರವಂತರು, ಸಕಲ ವಾದ್ಯ ವೈಭವ, ಕಳಸ ಕನ್ನಡಿ ಆರತಿಯೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ