ಅಧ್ಯಾತ್ಮ ಕಾಲ ಕಳೆಯಲು ಅಲ್ಲ, ಇದು ಬದುಕಿನ ಯಶಸ್ಸಿನ ಬುನಾದಿ

| Published : Feb 10 2024, 01:46 AM IST

ಸಾರಾಂಶ

ಅಧ್ಯಾತ್ಮ ಎಲ್ಲರಿಗೂ ಸಾಧ್ಯವಾಗುವ ಹಾದಿಯಲ್ಲ. ವಿಚಾರ ಮಾಡದವರಿಗೆ, ತನ್ನ ತಾನು ಅರಿಯದವರಿಗೆ ಯಾವತ್ತೂ ಶಾಂತಿ ಸಿಗಲ್ಲ. ಮನುಷ್ಯನ ಬದುಕು ಸಾರ್ಥಕಗೊಳಿಸುವ ಸರಳ ಮಾರ್ಗ ಅಧ್ಯಾತ್ಮವಾಗಿದೆ.

ಕನ್ನಡಪ್ರಭ ವಾರ್ತೆ, ಬೀದರ್‌

ಅಧ್ಯಾತ್ಮ ಕಾಲ ಕಳೆಯಲು ಅಲ್ಲ.‌ ಇದು ಬದುಕಿನ ಯಶಸ್ಸಿನ ಬುನಾದಿಯಾಗಿದೆ. ಅನಂತ ಜನ್ಮಗಳ ಪುಣ್ಯವಿದ್ದವರು ಅಧ್ಯಾತ್ಮದ ಕಡೆಗೆ ಬರುತ್ತಾರೆ ಎಂದು ಚಿದಂಬರಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಡಾ. ಶಿವಕುಮಾರ ಮಹಾ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಶಿವನಗರದ ಪಾಪನಾಶ ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ಪರಿಸರದ ಸ್ವಾಮಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಒಂದು ವಾರ ನಡೆಯಲಿರುವ ಸಾರ್ಥಕ ಜೀವನಕ್ಕೆ ಸರಳ ಸೂತ್ರಗಳು ಪ್ರವಚನ ಮಾಲಿಕೆಯನ್ನು ಉದ್ಘಾಟಿಸಿ, ಬೀದರ್‌ ರಾಮಕೃಷ್ಣ ವಿವೇಕಾನಂದ ಆಶ್ರಮ ಇಲ್ಲಿ‌ ಮಾಡುತ್ತಿರುವ ಸಮಾಜಮುಖಿ, ಧರ್ಮ ಕಾರ್ಯಗಳು ಮಾದರಿ ಎಂದರು.ಅಧ್ಯಾತ್ಮ ಎಲ್ಲರಿಗೂ ಸಾಧ್ಯವಾಗುವ ಹಾದಿಯಲ್ಲ. ವಿಚಾರ ಮಾಡದವರಿಗೆ, ತನ್ನ ತಾನು ಅರಿಯದವರಿಗೆ ಯಾವತ್ತೂ ಶಾಂತಿ ಸಿಗಲ್ಲ. ಮನುಷ್ಯನ ಬದುಕು ಸಾರ್ಥಕಗೊಳಿಸುವ ಸರಳ ಮಾರ್ಗ ಅಧ್ಯಾತ್ಮವಾಗಿದೆ. ಅಧ್ಯಾತ್ಮದಲ್ಲಿ ನಾವೆಲ್ಲರೂ ಮುಳುಗಿದಾಗಲೇ ಜೀವನದ ಸತ್ಯ ಅರಿಯಲು ಸಾಧ್ಯ ಎಂದು ಹೇಳಿದರು.

ಒಂದು ವಾರ ಸಾರ್ಥಕ ಜೀವನಕ್ಕೆ ಸರಳ ಸೂತ್ರಗಳು ಕುರಿತು ಪ್ರವಚನ ನೀಡಲಿರುವ ವಿಜಯಪುರ ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ‌ ನಿರ್ಭಯಾನಂದ ಸರಸ್ವತಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರು ಯಲಹಂಕದ ರಾಮಕೃಷ್ಣ ವೇದಾಂತ ಆಶ್ರಮದ ಅಧ್ಯಕ್ಷರಾದ ಅಭಯಾನಂದ ಮಹಾರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಸುಮೇಧಾನಂದ ಮಹಾರಾಜ ಭಗವನ್ನಾಮ ಸಂಕೀರ್ತನೆ ನಡೆಸಿಕೊಟ್ಟರು. ಜ್ಯೋತಿರ್ಮಯಾನಂದ ಮಹಾರಾಜ ಇದ್ದರು. ವಿರುಪಾಕ್ಷ ಗಾದಗಿ ಸ್ವಾಗತಿಸಿದರು. ಸದಾನಂದ ಜೋಶಿ ವಂದಿಸಿದರು. ಚನ್ನಬಸವ ಹೇಡೆ ನಿರೂಪಿಸಿದರು. ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಫೆ. 13ರವರೆಗೆ ಪ್ರತಿ ನಿತ್ಯ ಸಂಜೆ 6.30ರಿಂದ ಪ್ರವಚನ ನೀಡಲಿದ್ದಾರೆ.