ಭಾರತೀಯರ ಬಹುದೊಡ್ಡ ಸಂಪತ್ತು ಆಧ್ಯಾತ್ಮ. ನಮ್ಮ ಆಧ್ಯಾತ್ಮ ಸಂಸ್ಕೃತಿಯ ಫಲವಾಗಿ ಸಾವಿರಾರು ವರ್ಷಗಳ ಕಾಲ ನಮ್ಮ ಮೇಲೆ ಪರಕೀಯರು ಆಳ್ವಿಕೆ ಮಾಡಿದರೂ ನಮ್ಮ ಸಂಸ್ಕೃತಿ ಬಲವಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಭಾರತೀಯರ ಬಹುದೊಡ್ಡ ಸಂಪತ್ತು ಆಧ್ಯಾತ್ಮ. ನಮ್ಮ ಆಧ್ಯಾತ್ಮ ಸಂಸ್ಕೃತಿಯ ಫಲವಾಗಿ ಸಾವಿರಾರು ವರ್ಷಗಳ ಕಾಲ ನಮ್ಮ ಮೇಲೆ ಪರಕೀಯರು ಆಳ್ವಿಕೆ ಮಾಡಿದರೂ ನಮ್ಮ ಸಂಸ್ಕೃತಿ ಬಲವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯದಲ್ಲಿ ದಿವಗಿಯ ಶ್ರೀ ರಾಮಾನಂದ ಅವಧೂತ ಸ್ವಾಮಿ ಮಠ ಚ್ಯಾರಿಟೇಬಲ್ ಟ್ರಸ್ಟ್ ನೀಡುವ ಶಿಕ್ಷಣ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು. ಭಾರತದ ಶಕ್ತಿ ಸೈನ್ಯ, ಶಸ್ತ್ರಾಸ್ತ್ರ, ಆರ್ಥಿಕತೆಯ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ನಾಡಿನ ಉದ್ದಕ್ಕೂ ಆಧ್ಯಾತ್ಮಿಕ ನೆಲೆಗಟ್ಟನ್ನು ಒದಗಿಸಿಕೊಡುವ, ಗಟ್ಟಿಗೊಳಿಸಿಕೊಡುವ ಯತಿವರೇಣ್ಯರಿದ್ದಾರೆ, ಅವಧೂತ ಪರಂಪರೆ ಇದೆ. ಈ ಅಗಾದ ಸಂಪತ್ತನ್ನು ಸ್ವಾಮಿ ವಿವೇಕಾನಂದರು ಜಗತ್ತಿನಾದ್ಯಂತ ತಲುಪಿಸುವ ಕಾರ್ಯ ಮಾಡಿದ್ದರು. ಎಲ್ಲದರ ಫಲವಾಗಿ ನಮ್ಮ ಸಂಸ್ಕೃತಿ ಅಚ್ಚಳಿಯದೇ ನಿಂತಿದೆ ಎಂದರು.ವಿದ್ಯಾರ್ಥಿಗಳು ಸಹಾಯ ಪಡೆದಾಗ ಅದರ ಋಣ ನಮ್ಮ ಮೇಲಿದೆ ಎಂಬ ಭಾವನೆಯಿಂದ ಜಾಗೃತರಾಗಿರಬೇಕು. ಅನೇಕ ದಾನಿಗಳು ಸರ್ಕಾರಕ್ಕಿಂತ ಜಾಸ್ತಿ ಸಹಾಯ ಮಾಡುತ್ತಿದ್ದಾರೆ. ಈ ಕೊಡುಗೆ ರಾಷ್ಟ್ರ ನಿರ್ಮಾಣ, ಸಮಾಜಕ್ಕೆ ಸಿಗಬೇಕು. ಕೊಡುಗೆ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಶಿಕ್ಷಣ ಪೂರೈಸಿ ಉತ್ತಮ ಉದ್ಯೋಗ ಹೊಂದಿ, ಗಳಿಕೆ ಆರಂಭಿಸಿದ ಬಳಿಕ ಅಲ್ಪ ಪ್ರಮಾಣದಲ್ಲಾದರೂ ಸಮಾಜಕ್ಕೆ ಕೊಡುವ ನಿರ್ಧಾರ ಮಾಡಬೇಕು. ನಾವು ಕಷ್ಟದಲ್ಲಿ ಇರುವವರ ಧ್ವನಿ ಆಗಬೇಕು, ರಾಷ್ಟ್ರದ ಏಳ್ಗೆಗೆ ಕೊಡುಗೆ ಕೊಡುವಂತಾಗಬೇಕು ಎಂಬ ಕನಸನ್ನು ಈಗಿನಿಂದಲೇ ಕಾಣಬೇಕು ಎಂದರು.ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಕುಮಾರ ಭಟ್ ಮಾತನಾಡಿದರು.ಕೊಳಗಿಬೀಸ್ ಸುತ್ತಮುತ್ತಲಿನ ಪ್ರೌಢಶಾಲೆಗಳಾದ ಗೋಳಿ, ಸಂಪಖಂಡ, ತಟ್ಟಿಕೈ, ಕಿಬ್ಬಳ್ಳಿ ಮತ್ತು ಹೆಗ್ಗರಣಿ ಪ್ರೌಢ ಶಾಲೆಯ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ಶಿಕ್ಷಣ ಪರಿಕರ ವಿತರಿಸಲಾಯಿತು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ದೇವಾಲಯ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ಟ್ರಸ್ಟ್ ಅಧ್ಯಕ್ಷ ಪ್ರಕಾಶ ಪಂಡಿತ, ಸ್ಥಳೀಯ ಪ್ರಮುಖರಾದ ಎಂ.ಎಲ್. ಹೆಗಡೆ ಹಲಸಗಿ, ಉಮಾಪತಿ ಭಟ್ ಮತ್ತಿಗಾರ, ಕೆ.ವಿ. ಹೆಗಡೆ, ಮಂಜುನಾಥ ಭಟ್, ಸತ್ಯನಾರಾಯಣ ನಾಯಕ ಇತರರಿದ್ದರು.