ಸಾರಾಂಶ
ಕಾರ್ಯಕ್ರಮ । ಸರಣಿ ಉಪನ್ಯಾಸದಲ್ಲಿ ಅಭಿಮತ । ಹಾಸನ ವೈದ್ಯಕೀಯ ಮಹಾವಿದ್ಯಾಲಯ ಹಿಮ್ಸ್ ಆಯೋಜನೆಕನ್ನಡಪ್ರಭ ವಾರ್ತೆ ಹಾಸನ
ಕ್ಯಾನ್ಸರ್ ಎಂಬುದು ಎಲ್ಲರ ಜೀವ ಹಿಂಡುವ ರೋಗ. ಆದರೆ ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಂಡ ರೋಗಿಯು ತನ್ನ ಮನೋಸ್ಥೈರ್ಯವನ್ನು ವೃದ್ಧಿಸಿಕೊಂಡು ನಿರೋಗಿಯೆಂಬಂತೆ ಜೀವಿಸಬಲ್ಲ ಎಂದು ಹಾಸನ ವೈದ್ಯಕೀಯ ಮಹಾವಿದ್ಯಾಲಯ ‘ಹಿಮ್ಸ್’ನ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಬಿ ರವಿಕಿರಣ್ ಹೇಳಿದರು.ಹಾಸನ ವೈದ್ಯಕೀಯ ಮಹಾವಿದ್ಯಾಲಯ ಅಧ್ಯಾತ್ಮ ಕುರಿತು ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿ, ಆಧ್ಯಾತ್ಮ ಎಂಬುದು ಕೇವಲ ಮಠ, ಸನ್ಯಾಸಿ, ವಿದ್ವಾಂಸರಿಗೆ ಸಂಬಂಧಿಸಿದ್ದಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸಿದ್ಧಾಂತದಲ್ಲಿ ಜೀವಿಸುತ್ತಾನೆ. ಆ ಸಿದ್ಧಾಂತವು ಧನಾತ್ಮಕ ಚಿಂತನೆಯನ್ನು ಒಳಗೊಂಡಿದ್ದರೆ ಅದರಲ್ಲಿ ಆಧ್ಯಾತ್ಮವಿದೆಯೆಂದೇ ಅರ್ಥ. ತನ್ನನ್ನು ತಾನು ಅರಿಯುವುದು ಆಧ್ಯಾತ್ಮ. ವೈದ್ಯನು ಎಷ್ಟು ಗಹನವಾಗಿ ರೋಗಲಕ್ಷಣ ಸಿದ್ಧಾಂತವನ್ನು ಅಭ್ಯಸಿಸುತ್ತಾನೋ ಅಷ್ಟೇ ಗಹನವಾಗಿ ರೋಗಿಯ ಮನೋನಿಗ್ರಹಕ್ಕೆ ಪೂರಕವೆನಿಸುವ ಸಲಹೆ ನೀಡಲು ವೈದ್ಯನಿಗೆ ಸಿದ್ಧಾಂತಯುತ ಆಧ್ಯಾತ್ಮ ಹೃದಯವೂ ಬೇಕು. ರೋಗಿಯ ಸ್ಥಾನದಲ್ಲಿ ತಾನು ನಿಂತು ರೋಗಿಯನ್ನು ಅರ್ಥೈಸಿಕೊಂಡು ರೋಗಚಿಕಿತ್ಸೆ, ಮನೋಚಿಕಿತ್ಸೆ ಎರಡನ್ನೂ ನೀಡಬೇಕು ಎಂದು ಹೇಳಿದರು.
ರೋಗಿಯೊಬ್ಬನಿಗೆ ಕ್ಯಾನ್ಸರ್ ಆಗಿದೆ ಎಂಬುದು ತಿಳಿದಾಗ ರೋಗಿ ಕುಗ್ಗಿಹೋಗುತ್ತಾನೆ. ವೈದ್ಯರು ಆತನ ರೋಗ ಉಲ್ಬಣವಾಗುವುದನ್ನು ತಡೆಯಬಹುದು. ಆದರೆ ಚಿಕಿತ್ಸೆಗೆ ಸಹಕರಿಸುವುದಕ್ಕೆ ರೋಗಿ ಧೃತಿಗೆಡದಿರುವುದು ಮುಖ್ಯವಾಗುತ್ತದೆ. ಈ ಕಾರ್ಯದಲ್ಲಿ ವ್ಯಕ್ತಿಯು ತಾನು ರೂಢಿಸಿಕೊಂಡು ಬಂದ ಜೀವನಶೈಲಿ, ಚಿಂತನಶೈಲಿ ಕಾರಣವಾಗುತ್ತದೆ. ನಮ್ಮ ಋಷಿಮುನಿಗಳು ಯಾವ ಪಥವನ್ನು ಅನುಸರಿಸಿ ಸತ್ಯವನ್ನು ಕಂಡುಕೊಂಡರೋ ಅದನ್ನು ಅನುಸರಿಸಿದಾಗ ಸಹಿಷ್ಣುತೆ, ದೈವತ್ವ ತನಗೆ ತಾನೇ ಗೋಚರವಾಗುತ್ತದೆ. ಪ್ರೊಗ್ನೋಸಿಸ್ ಎಂಬುದು ಕಾಯಿಲೆಯ ಬಗ್ಗೆ ಮುನ್ಸೂಚನೆ ನೀಡುವಂತಹದು. ಇದರ ಮೂಲರೂಪವೇ ಪ್ರಜ್ಞೆ ಎಂಬುದಿರಬಹುದು. ಪ್ರಜ್ಞಾವಂತಿಕೆಯ ಜೀವನಸರಣಿ ಎಲ್ಲಕ್ಕೂ ಸಹಕಾರಿ. ಕಾರ್ಯಕಾರಣ ಸಂಬಂಧವಿಲ್ಲದೆ ಯಾವುದೂ ಆಗುವುದಿಲ್ಲ ಎಂಬುದನ್ನು ಅಧ್ಯಾತ್ಮ ತಿಳಿಸುತ್ತದೆ. ರೋಗಿಗೆ ಅಂತಿಮ ಫಲವೂ ಗೋಚರವಾದಾಗ ನಿಶ್ಚಿಂತೆಯಿಂದ ಬಂದದ್ದನ್ನು ಅನುಭವಿಸುವ ಶಕ್ತಿ ಬರುತ್ತದೆ ಎಂದರು.ಇಬ್ಬರು ವ್ಯಕ್ತಿಗಳಿಗೆ ರೋಗವೊಂದೇ ಆಗಿದ್ದರೂ, ಚಿಕಿತ್ಸಾ ಮಾರ್ಗ ರೋಗಿಯ ಆನುವಂಶಿಕ ಜೀವಶಾಸ್ತ್ರವನ್ನು ಅನುಸರಿಸಿ ಬೇರೆಯೇ ಆಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯನೂ ಸಮತೋಲಿತ ಮನೋಧರ್ಮವನ್ನು ಕಾಪಾಡಿಕೊಳ್ಳಬೇಕು. ತಾನು ಓದಿಕೊಂಡದ್ದನ್ನಷ್ಟೇ ಪ್ರಯೋಗಿಸಲಾಗುವುದಿಲ್ಲ ಎಂದು ತಮ್ಮದೇ ಅನುಭವದ ಕೆಲವು ರೋಗಿಗಳ ಉದಾಹರಣೆಗಳೊಂದಿಗೆ ಮತ್ತು ಮಹಾಭಾರತ, ಉಪನಿಷತ್ ವಿಚಾರಧಾರೆಗಳೊಂದಿಗೆ ವಿವರಿಸಿದರು.
ಸಂಸ್ಕೃತ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀಕಂಠಯ್ಯ ಮಾತನಾಡಿ, ‘ನಾವು ಯಾರನ್ನು ಅಧ್ಯಾತ್ಮಜೀವಿ, ಮಹಾಪುರುಷರು ಎಂದು ಗೌರವಿಸುತ್ತೇವೋ ಅಂತಹವರಿಗೂ ರೋಗ ಬರಬಾರದೆಂದಿಲ್ಲ. ಅದು ನಮ್ಮ ಕರ್ಮವನ್ನನುಸರಿಸಿ ಬರುವಂತಹುದೇ ಆಗಿದೆ. ಮಹರ್ಷಿ ರಮಣರು, ರಾಮಕೃಷ್ಣಪರಮಹಂಸರು, ಜೀವನ್ಮುಕ್ತರಾದ ಶೃಂಗೇರಿ ಪೀಠದ ಚಂದ್ರಶೇಖರಭಾರತೀ ಸ್ವಾಮಿಗಳಂತಹವರಿಗೂ ಸಹ ವ್ಯಾಧಿ ಎಂಬುದು ಬಿಡಲಿಲ್ಲ. ಆದರೆ ಅವರ ಆಧ್ಯಾತ್ಮಿಕ ಒಳತೋಟಿಯು ಅವರ ನಿತ್ಯ ಜೀವನ, ಅಧ್ಯಯನ, ಲೋಕಸಂಗ್ರಹ ಕಾರ್ಯ ಯಾವುದರಲ್ಲೂ ತೊಂದರೆಯಾಗದಂತೆ ನೋಡಿಕೊಂಡಿತು. ರೋಗವಿದ್ದರೂ ಅದು ದೇಹಕ್ಕೆ, ಆತ್ಮಕ್ಕಲ್ಲ ಎಂದು ಜೀವಿಸಿ ನಮಗೆ ಆಚಾರ್ಯ ಪುರುಷರೆನಿಸಿದರು’ ಎಂದರು.ಭಾನು. ಮೊ.ಶ್ರೀ. ಪ್ರಾರ್ಥಿಸಿ, ಉಪನ್ಯಾಸಕ ಭೈರಪ್ಪನರು ಸ್ವಾಗತಿಸಿದರು. ರಮೇಶ್ ಮೂಲಿಮನಿ ನಿರೂಪಿಸಿ ವಂದಿಸಿದರು.ಹಾಸನ ವೈದ್ಯಕೀಯ ಮಹಾವಿದ್ಯಾಲಯ ಅಧ್ಯಾತ್ಮ ಕುರಿತು ಆಯೋಜಿಸಿದ್ದ ಉಪನ್ಯಾಸದಲ್ಲಿ ಹಿಮ್ಸ್‌ನ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಬಿ ರವಿಕಿರಣ್ ಮಾತನಾಡಿದರು.