ಪೊಲೀಸರಿಗೆ ಕೋರ್ಟ್ ಆದೇಶದ ಅರಿವು ಮುಖ್ಯ: ಎಸ್ಪಿ ಶ್ರೀಹರಿಬಾಬು

| Published : Mar 18 2024, 01:57 AM IST

ಸಾರಾಂಶ

ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲ ಇಲಾಖೆಗಳು ಒಂದಾಗಿ ಕೆಲಸ ಮಾಡಬೇಕಿದೆ. ನಮಗೆ ಗೊತ್ತಿಲ್ಲದೇ ಸಮಾಜದಲ್ಲಿ ಬಾಲ್ಯ ವಿವಾಹಗಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತವೆ.

ಹೊಸಪೇಟೆ: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳು ಕಾಲ ಕಾಲಕ್ಕೆ ನೀಡುವ ಆದೇಶಗಳನ್ನು ಪ್ರತಿಯೊಬ್ಬ ಪೊಲೀಸರು ಅರಿತು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ವಿಜಯನಗರ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಹೇಳಿದರು.

ನಗರದಲ್ಲಿ ಶನಿವಾರ ಜಿಲ್ಲಾ ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಚೈತನ್ಯ ಗ್ರಾಮೀಣಾಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಬಾಲನ್ಯಾಯ ಕಾಯ್ದೆಗಳ ಕುರಿತು ಜಿಲ್ಲಾ ಪೊಲೀಸ್ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲ ಇಲಾಖೆಗಳು ಒಂದಾಗಿ ಕೆಲಸ ಮಾಡಬೇಕಿದೆ. ನಮಗೆ ಗೊತ್ತಿಲ್ಲದೇ ಸಮಾಜದಲ್ಲಿ ಬಾಲ್ಯ ವಿವಾಹಗಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತವೆ. ಅವುಗಳನ್ನ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಕರ್ತವ್ಯ ಎಂದು ಕೆಲಸ ಮಾಡಬೇಕಿದೆ. ಭಿಕ್ಷಾಟನೆ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಹಲವು ಆಯಾಮಗಳಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕಿದೆ ಎಂದರು.

ಬಾಲ್ಯವಿವಾಹ ತಡೆಯುವ ಮಹತ್ತರ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಇವರ ಕಾರ್ಯ ಶ್ಲಾಘನಿಯವಾದುದು. ಇನ್ನು ಬಾಲ್ಯ ವಿವಾಹ ನಡೆಯುವುದನ್ನು ತಡೆಯುವುದಕ್ಕೆ ಹೋದಾಗ ಅಂಗನವಾಡಿ ಕಾರ್ಯಕರ್ತೆಯರಿಗೆ ಹಲವು ಬಾರಿ ಜೀವ ಬೆದರಿಕೆಗಳು ಬಂದಿರುವ ಅದೇಷ್ಟೋ ಉದಹಾರಣೆಗಳಿವೆ. ನಾವು ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ನೀಡಬೇಕು ಎಂದರು.

ಮಕ್ಕಳಿಗೆ ಕಡ್ಡಾಯವಾಗಿ ಪ್ರತಿಯೊಬ್ಬರ ಪೋಷಕರು ಶಿಕ್ಷಣ ಕೊಡುವ ಕಾರ್ಯ ಆಗಬೇಕು. ಗ್ರಾಮೀಣ ಮಟ್ಟದಿಂದ ಹಿಡಿದು, ನಗರ ಪ್ರದೇಶಗಳಲ್ಲೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ವಾಗಬೇಕು. ಮಕ್ಕಳು ಶಾಲೆಗೆ ಹೋಗುವಂತೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ ಎಂದರು.

ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಸಂಪನ್ಮೂಲ ವ್ಯಕ್ತಿ ತರಬೇತುದಾರ ರೋಹಿತ್ ಸಿ.ಜೆ. ಮಾತನಾಡಿ, ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಕಾಯ್ದೆಯ ಕುರಿತು ಜಾಗೃತಿ ಮೂಡಿಸಬೇಕು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ರೀತ್ಯ ಕ್ರಮ ವಹಿಸಬೇಕು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಪೋಕ್ಸೋ ಕಾಯ್ದೆ-2012ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಜೊತೆಗೆ ಈ ಕಾಯ್ದೆ ಅಂಶಗಳನ್ನು ಪ್ರಚುರಪಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಸ್. ಶ್ವೇತಾ ಮಾತನಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸುದೀಪ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.

ಡಿವೈಎಸ್ಪಿ ಶರಣ ಬಸವೇಶ್ವರ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ ಯು., ಮಕ್ಕಳ ರಕ್ಷಣಾ ಘಟಕದ ಗಂಗಾಧರ್ ಡಿ., ಶರಣಪ್ಪ, ಶ್ರೀಕಾಂತ್‌, ನಿಂಗರಾಜ, ಸಖಿ ಘಟಕದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.