ಬ್ಯಾಡಗಿ ದುರ್ಘಟನೆಗೆ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ನೀತಿ ಕಾರಣ

| Published : Mar 18 2024, 01:56 AM IST

ಸಾರಾಂಶ

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಗೆ ಕೇಂದ್ರ ಸರ್ಕಾರದ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ನೀತಿಗಳೇ ಕಾರಣ. ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಆಗ್ರಹಿಸಿದರು.

ಹಾವೇರಿ: ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಗೆ ಕೇಂದ್ರ ಸರ್ಕಾರದ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ನೀತಿಗಳೇ ಕಾರಣ. ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.ಎಪಿಎಂಸಿ ಬ್ಯಾಡಗಿಯಲ್ಲಿ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ ಆಸ್ತಿ ಪಾಸ್ತಿಗಳಿಗೆ ದಾಖಲಾತಿಗಳಿಗೆ ಉಂಟು ಮಾಡಿದ ಹಾನಿಯನ್ನು ಕೆಪಿಆರ್‌ಎಸ್‌ ಖಂಡಿಸುತ್ತದೆ. ಆದರೆ, ರೈತರ ಆಕ್ರೋಶಕ್ಕೆ ಕಾರಣವಾದ ಅಂಶಗಳನ್ನು ಸರ್ಕಾರ ಕೂಲಂಕಷವಾಗಿ ಗಮನಿಸಬೇಕು ಎಂದರು.ರೈತರ ಉದ್ರಿಕ್ತತೆಯ ಹಿಂದೆ ಬೆಲೆ ಕುಸಿತ ಕಾರ್ಯ ನಿರ್ವಹಿಸಿರುವ ಸಾಧ್ಯತೆಗಳಿವೆ ಎಂಬುದನ್ನು ಸರ್ಕಾರ ಗಮನಿಸಬೇಕು. ಕಳೆದ 2023ರಲ್ಲಿ ಗುಂಟೂರು ಮೆಣಸಿನಕಾಯಿ ದರ ಕ್ವಿಂಟಲ್‌ಗೆ ₹ 25 ಸಾವಿರ ಇದ್ದದ್ದು ಈಗ ₹15 ಸಾವಿರಕ್ಕೆ ಕುಸಿದಿದೆ. ಅದೇ ರೀತಿ, ಬ್ಯಾಡಗಿ ಕಡ್ಡಿಗಾಯಿ ಕಳೆದ ವರ್ಷ ₹40 ಸಾವಿರ ಇದ್ದದ್ದು ಈ ವರ್ಷ ಅದು ₹ 8ರಿಂದ ₹10 ಸಾವಿರಕ್ಕೆ ಇಳಿದಿದೆ. ಈ ಬೆಲೆ ಕುಸಿತ ರೈತರನ್ನು ತೀವ್ರ ಚಿಂತಾಕ್ರಾಂತರನ್ನಾಗಿಸಿದೆ ಎಂದರು.

ಕಿಡಿಗೇಡಿಗಳ ದುಷ್ಕೃತ್ಯ ತೀವ್ರ ಖಂಡನೀಯವಾಗಿದೆ. ಇವರ ಮೇಲೆ ಕಠಿಣ ಕಾನೂನಿನ ಕ್ರಮವಹಿಸಲು ಒತ್ತಾಯಿಸಿದ ಅವರು, ಡಾ. ಎಂ.ಎಸ್. ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಲಾಭದಾಯಕ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಯಾದರೆ ಮಾತ್ರ ಈ ತರದ ಘಟನೆಗಳನ್ನು ತಡೆಯಲು ಸಾಧ್ಯ ಎಂದರು.

ರೈತರ ಈ ಸಂಕಷ್ಟಕ್ಕೆ ಬೆಲೆಗಳನ್ನು ತಮ್ಮ ಲಾಭಕ್ಕೆ ತಕ್ಕಂತೆ ಏರಿಳಿತ ಮಾಡಿ ಲೂಟಿ ಮಾಡುವ ಕಾರ್ಪೋರೇಟ್ ವ್ಯಾಪಾರಿಗಳ ದುಷ್ಠತನವೇ ಕಾರಣವಾಗಿದೆ. ಈ ಕಾರ್ಪೋರೇಟ್ ಸಂಸ್ಥೆಗಳು ಬೆಲೆಗಳನ್ನು ಏರಿಳಿತ ಮಾಡಿ ಲೂಟಿ ಮಾಡಲು ಅವಕಾಶ ನೀಡಿರುವ ಕೇಂದ್ರ ಸರ್ಕಾರವೇ ಈ ದುರಂತದ ನೇರ ಹೊಣೆ ಹೊರಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಆರ್.ಎಸ್. ಬಸವರಾಜ, ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್., ಅಂಗನವಾಡಿ ನೌಕರರ ಸಂಘಟನೆ ಮುಖಂಡ ಮಹಾಂತೇಶ ಎಲಿ, ಹಮಾಲಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಮಹಾದೇವಪ್ಪ ಇತರರು ಇದ್ದರು.