ನಗರದ ದರ್ಬೆಯಲ್ಲಿ ಆ. ೨೧ರಂದು ನಡೆದ ಅಹಿತಕರ ಘಟನೆ ಸಂಬಂಧ ಹಿಂದೂ ಜಾಗರಣ ವೇದಿಕೆ ಮಂಗಳವಾರ ನಗರದಲ್ಲಿ ಸ್ವಯಂ ಪ್ರೇರಿತ ಬಂದ್ ಕರೆ ನೀಡಿದ್ದು, ಮಂಗಳವಾರ ಪುತ್ತೂರು ನಗರವಿಡೀ ಬಂದ್ ಆಗಿತ್ತು.
ಪುತ್ತೂರು : ನಗರದ ದರ್ಬೆಯಲ್ಲಿ ಆ. ೨೧ರಂದು ನಡೆದ ಅಹಿತಕರ ಘಟನೆ ಸಂಬಂಧ ಹಿಂದೂ ಜಾಗರಣ ವೇದಿಕೆ ಮಂಗಳವಾರ ನಗರದಲ್ಲಿ ಸ್ವಯಂ ಪ್ರೇರಿತ ಬಂದ್ ಕರೆ ನೀಡಿದ್ದು, ಮಂಗಳವಾರ ಪುತ್ತೂರು ನಗರವಿಡೀ ಬಂದ್ ಆಗಿತ್ತು.
ಇದರ ಜೊತೆಗೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜಾ ದಿನ ಘೋಷಿಸಿರುವುದು ಮತ್ತು ಈದ್ ಮಿಲಾದ್ ಹಬ್ಬವೂ ಬಂದ್‌ಗೆ ಪೂರಕವಾಗಿತ್ತು.ದರ್ಬೆಯಲ್ಲಿ ನಡೆದ ಘಟನೆ ಸಂಬಂಧ ಹಿಂದೂ ಜಾಗರಣಾ ವೇದಿಕೆ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಾಗಿಲೇ ತೆರೆಯಲಿಲ್ಲ. ಈ ನಡುವೆ ಈದ್ ಮಿಲಾದ್ ಹಬ್ಬದ ಕಾರಣ ಮುಸ್ಲಿಂ ಸಮುದಾಯ ತಮ್ಮ ಅಂಗಡಿಗಳ ವ್ಯಾಪಾರ-ವಹಿವಾಟುಗಳಿಗೆ ರಜೆ ಘೋಷಿಸಿದ್ದರು. ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಘೋಷಣೆ ಮಾಡಿದ ಸಾರ್ವತ್ರಿಕ ರಜೆ ಬಂದ್‌ಗೆ ಪೂರಕವಾಗಿತ್ತು.
ಪುತ್ತೂರು ನಗರದಲ್ಲಿ ಅತ್ಯಂತ ವಿರಳ ಜನಸಂಚಾರ ಕಂಡು ಬಂತು. ಖಾಸಗಿ ವಾಹನಗಳು ಹಾಗೂ ಸರ್ಕಾರಿ ಬಸ್‌ಗಳು ಎಂದಿನಂತೆ ಓಡಾಟ ನಡೆಸುತ್ತಿದ್ದವು. ನಗರದಲ್ಲಿ ಜನ ಸಂಚಾರ ಕಡಿಮೆಯಾಗಿದ್ದ ಕಾರಣ ಆಟೋ ರಿಕ್ಷಾಗಳ ಓಡಾಟವೂ ವಿರಳವಾಗಿತ್ತು.ಬೆಳಿಗ್ಗೆ ನಗರದ ಕೆಲವು ಅಂಗಡಿ- ಹೊಟೇಲ್‌ಗಳು ಎಂದಿನಂತೆ ತೆರೆದಿದ್ದವು. ಮಧ್ಯಾಹ್ನದ ಹೊತ್ತಿಗೆ ಜನರೇ ಇಲ್ಲದ ಕಾರಣ ಈ ಬಾಗಿಲು ತೆರೆದಿದ್ದ ಅಂಗಡಿ-ಹೊಟೇಲ್‌ಗಳು ಕೂಡ ವ್ಯಾಪಾರ ವಹಿವಾಟು ನಿಲ್ಲಿಸಿ ತೆರೆದ ಬಾಗಿಲನ್ನು ಮುಚ್ಚಿದವು. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲಿನ ಡೈರಿ, ಪತ್ರಿಕಾ ಸ್ಟಾಲ್ ಮತ್ತಿತರ ವ್ಯವಸ್ಥೆಗಳು ಎಂದಿನಂತಿದ್ದವು.ಬಿಗಿ ಬಂದೋಬಸ್ತ್:ದರ್ಬೆ ಪ್ರಕರಣದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಬಂದ್ ಹಾಗೂ ಈದ್ ಮಿಲಾದ್ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿತ್ತು.ಅಮಿತ್ ಸಿಂಗ್ ಭೇಟಿ: ಪರಿಸ್ಥಿತಿ ಅವಲೋಕಿಸಲು ಪಶ್ಚಿಮ ವಲಯ ಮಹಾ ಪೊಲೀಸ್ ನಿರೀಕ್ಷಕ (ಐಜಿಪಿ) ಅಮಿತ್ ಸಿಂಗ್ ಮಂಗಳವಾರ ಪುತ್ತೂರಿಗೆ ಭೇಟಿ ನೀಡಿದರು.
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಪುತ್ತೂರಿನ ದರ್ಭೆಯಲ್ಲಿರುವ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ಐಜಿಪಿ ಅಮಿತ್ ಸಿಂಗ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮತ್ತು ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ. ಅವರು ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪರಿಸ್ಥಿತಿ ಮತ್ತು ಕೈಗೊಂಡಿರುವ ಭದ್ರತಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಬಿಜೆಪಿ ಧನ್ಯವಾದ:ಸ್ವಯಂ ಘೋಷಿತ ಬಂದ್ ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡಿದ ಪುತ್ತೂರಿನ ಎಲ್ಲ ವರ್ತಕ ಬಂಧುಗಳಿಗೆ, ವಾಹನ ಚಾಲಕರು ಹಾಗೂ ಮಾಲೀಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಪುತ್ತೂರು ಬಿಜೆಪಿ ವತಿಯಿಂದ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ ಎಂದು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದರ್ಬೆ ಘಟನೆಯಲ್ಲಿ ಹಲ್ಲೆಗೊಳಗಾದ ಮಹಿಳೆ ಹಾಗೂ ಅಮಾಯಕ ಕುಟುಂಬಕ್ಕೆ ನ್ಯಾಯ ದೊರಕುವಂತೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಬಿಜೆಪಿ ಈ ಮೂಲಕ ವಿನಂತಿಸುತ್ತದೆ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಬಂದ್ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ವಿಹಿಂಪ ಅಧ್ಯಕ್ಷ ಮೋಹನ್‌ದಾಸ್ ಕಾಣಿಯೂರು ಧನ್ಯವಾದ ಸಲ್ಲಿಸಿದರು.ಬಲವಂತ ಬಂದ್ ನಡೆದಿಲ್ಲ: ಎಸ್ಪಿ
ದರ್ಭೆ ಘಟನೆ ಸಂಬಂಧ ಸಮರ್ಪಕವಾದ ತನಿಖೆ ನಡೆಸಿಯೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಪಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಿಗೆ ಅನುಗುಣವಾಗಿ ನೋಟಿಸ್ ನೀಡುವುದು ಅಥವಾ ಬಂಧನ ಪ್ರಕ್ರಿಯೆ ನಡೆಯುತ್ತದೆ. ಹಿಂದಿನ ಪ್ರಕರಣಗಳಲ್ಲೂ ಅದೇ ರೀತಿ ಕ್ರಮ ಅನುಸರಿಸಿದ್ದೇವೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದರು. ಪುತ್ತೂರಿನ ಡಿವೈಎಸ್ಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಪುತ್ತೂರಿನ ಎಲ್ಲೂ ಬಲವಂತದ ಬಂದ್ ಕಂಡುಬಂದಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈದ್ ಮಿಲಾದ್ ಹಬ್ಬದ ಪ್ರಾರ್ಥನೆ ಹಾಗೂ ಮೆರವಣಿಗೆಗಳು ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು.