ಕ್ರೀಡಾ ಸ್ಪೂರ್ತಿ ಜೀವನದಲ್ಲಿ ಹಾಸು ಹೊಕ್ಕಾಗಬೇಕು: ಡಾ ಮಂತರ್ ಗೌಡ

| Published : Nov 19 2024, 12:48 AM IST

ಸಾರಾಂಶ

ಕ್ರೀಡೆಯಲ್ಲಿ ತೋರಿಸುವ ಸ್ಪೂರ್ತಿ ಜೀವನದಲ್ಲಿಯೂ ಹಾಸು ಹೊಕ್ಕಾಗಬೇಕು ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು. ಮಡಿಕೇರಿ ವಕೀಲರ ಸಂಘದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕ್ರೀಡೆಯಲ್ಲಿ ತೋರಿಸುವ ಸ್ಪೂರ್ತಿ ಜೀವನದಲ್ಲಿಯೂ ಹಾಸು ಹೊಕ್ಕಾಗಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಕರೆ ನೀಡಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಮಂತರ್ ಗೌಡ, ಸಮಾಜಕ್ಕೆ ಒಳಿತುಂಟು ಮಾಡುವ ವಿಚಾರಗಳಿಗೆ ಸಂಬಂಧಿಸಿದಂತೆ ವಕೀಲ ವೃಂದ ಕಾಳಜಿಯುತ ಕರ್ತವ್ಯ ತೋರುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಾಗಬೇಕು ಎಂದು ಆಶಿಸಿದರು.

ಕ್ರೀಡಾಕೂಟಗಳು ಎಲ್ಲರನ್ನೂ ಒಗ್ಗೂಡಿಸುತ್ತದೆ, ಸ್ಪೂರ್ತಿಯ ಜತೇ ಉತ್ಸಾಹ ಕೂಡ ಎಲ್ಲರಲ್ಲಿಯೂ ಮೂಡುವಂತಾಗುತ್ತದೆ, ಇಂಥ ಕ್ರೀಡಾಕೂಟದ ಮೂಲಕ ವಕೀಲ ವೃಂದ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಡಾ ಮಂತರ್ ಗೌಡ, ವಕೀಲರ ಸಂಘದ ಬೇಡಿಕೆಯಾಗಿರುವ ನ್ಯಾಯಾಲಯಕ್ಕೆ ಸೂಕ್ತ ತಡೆಗೋಡೆ ಮತ್ತು ನ್ಯಾಯಾಲಯದ ರಸ್ತೆ ದುರಸ್ಥಿಯನ್ನು ವಿಳಂಬ ರಹಿತವಾಗಿ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತನ್ನ ಮಾವ ಹೆಚ್ ಎನ್ ನಂಜೇಗೌಡ ಮತ್ತು ತಂದೆ ಎ ಮಂಜು ಕೂಡ ವಕೀಲರಾಗಿದ್ದದ್ದನ್ನು ಸ್ಮರಿಸಿಕೊಂಡ ಶಾಸಕ ಮಂತರ್ ಗೌಡ, ವಕೀಲ ವೃತ್ತಿ ಸಮಾಜದಲ್ಲಿ ಇಂದಿಗೂ ಗೌರವವನ್ನು ಉಳಿಸಿಕೊಂಡು ಸಮಾಜದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದೂ ಶ್ಲಾಘಿಸಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪುಂಡಲಿಕ ಹೊಸಮನಿ ಅವರು ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಒಳ್ಳೆಯ ಆರೋಗ್ಯ ಇದ್ದಾಗ ಮಾತ್ರ ಉತ್ತಮ ಮನಸ್ಸು ಕೂಡ ಇರುತ್ತದೆ, ಈ ನಿಟ್ಟಿನಲ್ಲಿ ವಕೀಲರ ಕ್ರೀಡಾಕೂಟ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಶಾಂತಿ ಮಾತನಾಡಿ, ವಕೀಲರು ಒಂದು ದಿನ ಎಲ್ಲ ಕೆಲಸದ ಒತ್ತಡ ಮರೆತು ಕ್ರೀಡಾಕೂಟದ ಮೂಲಕ ಸಂಭ್ರಮಿಸುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ ಎ ನಿರಂಜನ್ ಮಾತನಾಡಿ, ವಕೀಲರಲ್ಲಿನ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವುದರ ಜತೆಗೇ ಎಲ್ಲಾ ಕೆಲಸ ಕಾರ್ಯಗಳ ಜಂಜಾಟ ಮರೆತು ಒಗ್ಗಟ್ಟಾಗಿ ಕ್ರೀಡಾ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಕೌಟುಂಬಿಕ ಸಾಮರಸ್ಯ ಕಂಡುಕೊಳ್ಳಲು ಇಂಥ ಕ್ರೀಡಾಕೂಟವನ್ನು ವಕೀಲರ ಸಂಘ ಆಯೋಜಿಸುತ್ತಿದೆ ಎಂದು ಹೇಳಿದರು.

ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ ಎಂ ಕೇಶವ, ಉಪಾಧ್ಯಕ್ಷ ಎಂ ಪಿ ನಾಗರಾಜ್, ಖಜಾಂಜಿ ಜಿ ಆರ್ ರವಿಶಂಕರ್, ಜಂಟಿ ಕಾರ್ಯದರ್ಶಿ ಪವನ್ ಪೆಮ್ಮಯ್ಯ, ಸರ್ಕಾರಿ ಅಭಿಯೋಜಕರಾದ ಶ್ರೀಧರನ್ ನಾಯರ್, ರುದ್ರ ಪ್ರಸನ್ನ, ನ್ಯಾಯಾಲಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ವಕೀಲ ಕಪಿಲ್ ಕಾರ್ಯಕ್ರಮ ನಿರೂಪಿಸಿದರು.

ವಕೀಲರಿಗಾಗಿ ಕ್ರಿಕೆಟ್ ಹಗ್ಗಜಗ್ಗಾಟ, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಡಿಕೇರಿ ವಕೀಲರ ಸಂಘದ ನೂರಾರು ಸದಸ್ಯರು ದಿನವಿಡೀ ಆಯೋಜಿತ ಕ್ರೀಡಾಕೂಟದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಗಮನ ಸೆಳೆದರು.