ಸಾರಾಂಶ
ಹಾವೇರಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅಭಿವ್ಯಕ್ತಗೊಳಿಸಲು ಒಂದು ಉತ್ತಮ ವೇದಿಕೆ ಅವಶ್ಯವಾಗಿದ್ದು, ಕ್ರೀಡೆ ಮತ್ತು ಸಾಂಸ್ಕೃತಿಕ ವೇದಿಕೆಗಳು ಇದಕ್ಕೆ ಸಹಕಾರಿಯಾಗಿದ್ದು, ಎಲ್ಲರೂ ಇದರ ಸದುಪಯೋಗ ಮಾಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆಯ ೫೦ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಆಧುನಿಕತೆ ಬಂದಂತೆ ಗುರು ಶಿಷ್ಯ ಸಂಬಂಧವು ಬದಲಾಗುತ್ತದೆ. ವಿದ್ಯಾರ್ಥಿಯ ಬದುಕಿನ ಸಾರ್ಥಕತೆ ಹಿಂದೆ ಗುರುವಿನ ಅಪಾರ ಶ್ರಮವಿದೆ. ಶಾಲೆಯಲ್ಲಿ ಉತ್ತಮ ಕಲಿಕೆ ನಂತರ ಉತ್ತಮ ಬದುಕು ಕಟ್ಟಿಕೊಂಡು ಸ್ವಂತಕ್ಕೂ ಹಾಗೂ ಸಮಾಜಕ್ಕೂ ಸದುಪಯೋಗ ಪಡಿಸಿಕೊಂಡರೆ ಅದೇ ಶಾಲೆಗೆ ಹಾಗೂ ಸಮಾಜಕ್ಕೂ ನೀಡುವ ಉಡುಗೊರೆಯಾಗಿದೆ. ಸ್ವಾರ್ಥಕ್ಕಿಂತ ನಿಸ್ವಾರ್ಥಕ್ಕೆ ಹೆಚ್ಚು ಬೆಲೆಯಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ಜಿ. ಮೇಟಿ ಮಾತನಾಡಿ, ವಿದ್ಯಾರ್ಜನೆ ಕಾಲದ ಜೀವನಾನುಭವನ್ನು ಭವಿಷ್ಯ ಬದುಕಿಗೆ ದಾರಿ ಬುತ್ತಿ ಮಾಡಿಕೊಳ್ಳಬೇಕು. ದೊಡ್ಡ ಕನಸುಗಳನ್ನು ಈಗಲೇ ಸಾಕಾರಗೊಳ್ಳಲು ಸಣ್ಣ ಸಣ್ಣ ಪ್ರಯತ್ನ ಮಾಡಿ ಯಶಸ್ಸು ಕಾಣಬೇಕು. ಯಶಸ್ಸು ಯಾವಾಗಲೂ ಕಠಿಣ ಪರಿಶ್ರಮ ಬೇಡುತ್ತದೆ. ಎಲ್ಲರೂ ಪರಿಶ್ರಮವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಕಾಶ್ಯಪ್‌ನ ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಶ್ರೀಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ ಎಸ್.ಎಸ್. ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ತುಪ್ಪದ, ವೀರಣ್ಣ ಅಂಗಡಿ, ಮಹಾಂತೇಶ ಮಳಿಮಠ, ಮಹೇಶ ಚಿನ್ನಿಕಟ್ಟಿ, ಡಾ. ಮೋಹನ ನಾಲ್ವವಾಡ, ಆರ್.ಎಸ್. ಮಾಗನೂರ, ಮುಖ್ಯೋಪಾಧ್ಯಾಯಿನಿ ಚನ್ನಮ್ಮ ಅಂತರವಳ್ಳಿ, ಟಿ.ಎಂ. ಲತಾಮಣಿ, ಶೋಭಾ ನಾಶೀಪುರ, ರೂಪಾ ಟಿ.ಆರ್. ಲೀಲಾವತಿ ಅಂದಾನಿಮಠ, ಎಂ.ಎಸ್.ಹಿರೇಮಠ, ವಿ.ಬಿ. ಬನ್ನಿಹಳ್ಳಿ, ಎಸ್.ಸಿ. ಮರಳಿಹಳ್ಳಿ ಇತರರು ಇದ್ದರು.ಈರಮ್ಮ ಹೊಂಬಳದ ಪ್ರಾರ್ಥಿಸಿದರು. ಎಸ್.ಎನ್. ಮಳೆಪ್ಪನವರ ಸ್ವಾಗತಿಸಿದರು. ಸಿ.ವೈ.ಅಂತರವಳ್ಳಿ ವಾರ್ಷಿಕ ವರದಿ ವಾಚಿಸಿದರು. ಎಸ್.ಕೆ. ಆಡಿನ ನಿರೂಪಿಸಿದರು. ಆನಂದ ಎಂ.ವಂದಿಸಿದರು.