ಮನುಷ್ಯನಿಗೆ ಕ್ರೀಡೆ ಮತ್ತು ಸಾಂಸ್ಕೃತಿಕತೆ ಈ ಎರಡು ವಿಷಯಗಳು ಬದುಕನ್ನು ಹಸನುಗೊಳಿಸುತ್ತವೆ ಎಂದು ಶ್ರೀಕ್ಷೇತ್ರ ದಸರಿಘಟ್ಟ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಮನುಷ್ಯನಿಗೆ ಕ್ರೀಡೆ ಮತ್ತು ಸಾಂಸ್ಕೃತಿಕತೆ ಈ ಎರಡು ವಿಷಯಗಳು ಬದುಕನ್ನು ಹಸನುಗೊಳಿಸುತ್ತವೆ ಎಂದು ಶ್ರೀಕ್ಷೇತ್ರ ದಸರಿಘಟ್ಟ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕಲ್ಪತರು ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ರಾಜ್ಯಮಟ್ಟದ ೩೯ನೇ ಹೊನಲು ಬೆಳಕಿನ ಪುರುಷ ಹಾಗೂ ಮಹಿಳೆಯರ ಖೋಖೋ ಚಾಂಪಿಯನ್‌ಷಿಪ್ ಪಂದ್ಯಾವಳಿಯ ಮೂರನೇ ದಿನ ಕ್ರೀಡಾಧಿಕಾರಿಗಳಿಗೆ ಮತ್ತು ಸ್ವಯಂಸೇವಕರಿಗೆ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಬಹುಮಾನ ಪಡೆಯುವದೇ ಮುಖ್ಯವಲ್ಲ. ಆಟ ಆಡುವುದು ಮುಖ್ಯವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸೋಲಿಗೆ ಬೇಸರ ಇಲ್ಲದೆ ಈ ನೆಲದಲ್ಲಿ ಖುಷಿಯಿಂದ ಪ್ರದರ್ಶನ ನೀಡಿದಲ್ಲಿ ಪ್ರೇಕ್ಷಕರ ಸಂತೋಷವೇ ಮುಖ್ಯವಾಗುತ್ತದೆ. ಬದುಕಿಗೆ ವಿದ್ಯೆ ಇದ್ದರೆ ಸಾಲದು ಬುದ್ಧಿ ಇರಬೇಕು. ಆಟ ಪಾಠ ಊಟ ಸಮತೂಕದಲ್ಲಿದ್ದರೆ ಮಾತ್ರ ಹಿತವೆನಿಸುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವವರಿಗೆ ದೈಹಿಕ ಮಾನಸಿಕ ಶಕ್ತಿ ಹೆಚ್ಚಿರಬೇಕು. ಎಲ್ಲಾ ಇಂದ್ರಿಯಗಳು ಸಕ್ರಿಯವಾಗಿ ಆಟದಲ್ಲಿ ಪಾಲ್ಗೊಂಡಾಗ ಮಾತ್ರ ಉತ್ಸಾಹ ಬರುತ್ತದೆ ಎಂದರು.
ಕ್ರೀಡೆಗೆ ಪ್ರೋತ್ಸಾಹವನ್ನು ಕೊಡುವಲ್ಲಿ ಮಠಮಾನ್ಯಗಳ ಪಾತ್ರ ಹೆಚ್ಚಿನದಾಗಿದೆ. ರಾಜ್ಯ ಅಂತರ್ ರಾಜ್ಯ ಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ದೇಶಿಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸುತ್ತವೆ. ದೇಶಿಯ ಕ್ರೀಡೆಗಳಾದ ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಖೋ ಖೋ ಮುಂತಾದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನಗರದ ಜನತೆ ಕೊಟ್ಟರೆ ದೇಶಿಯ ಆಟಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ನಂಜಾಮರಿ ಮಾತನಾಡಿ ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚು ಬೆಳೆಯ ತೊಡಗುತ್ತದೆ. ತಿಪಟೂರ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಲೋಕೇಶ್ವರ ಸತತವಾಗಿ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುತ್ತಾ ಬಂದಿರುವುದು ಸಂತೋಷದಾಯಕ ವಿಚಾರವಾಗಿದೆ. ಇದರಿಂದ ಅನೇಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ದೊರೆತು ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ಬೆಳೆದು ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ತಿಳಿಸಿದರು. ರಾಜ್ಯ ಖೋಖೋ ಸಂಸ್ಥೆಯ ಅಧ್ಯಕ್ಷ ಹಾಗೂ ಕ್ರೀಡಾಕೂಟದ ಮುಖ್ಯಸ್ಥರಾದ ಲೋಕೇಶ್ವರ್ ಅವರು ಮಾತನಾಡಿ, ನಮ್ಮ ಕಲ್ಪತರು ನಾಡಿನಲ್ಲಿ ಕ್ರೀಡಾಸಕ್ತರು, ಕ್ರೀಡಾಪಟುಗಳು ಹಾಗೂ ಪ್ರೋತ್ಸಾಹಕರು ಹೆಚ್ಚಿದ್ದು ಮುಂದೆಯೂ ವಿಭಿನ್ನ ಕ್ರೀಡೆಗಳನ್ನು ಪ್ರೋತ್ಸಾಹಿಸುವುದಲ್ಲದೆ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸುವತ್ತ ಹೆಚ್ಚು ಆಸಕ್ತಿ ವಹಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಇಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜೈ ಮಾರುತಿ ಟೆಕ್ನಾಂಡು ಕರಾಟೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಕೇಶವ್. ನಿ. ಬಿಇಒ ಸರ್ವ ಮಂಗಳ, ಜಾವಗಲ್ ಬಸವರಾಜ್. ಹಾಲಪ್ಪ, ಮಾದಿಹಳ್ಳಿ ರೇಣು, ಮಡೇನೂರು ವಿನಯ್, ಗೊರಗನಹಳ್ಳಿ ರಾಜು, ಮಡೆನೂರ್ ಸೋಮಣ್ಣ, ಮಂಜಣ್ಣ, ಬಸವರಾಜ್ ಮುಂತಾದವರು ಭಾಗಿಯಾಗಿದ್ದರು.