ಒತ್ತಡ ನಿವಾರಣೆಗೆ ಕ್ರೀಡೆ ಸುಲಭ ಮಾರ್ಗ: ನ್ಯಾ. ಕಾಮೇಶ್ವರ ರಾವ್

| Published : Mar 02 2025, 01:18 AM IST

ಒತ್ತಡ ನಿವಾರಣೆಗೆ ಕ್ರೀಡೆ ಸುಲಭ ಮಾರ್ಗ: ನ್ಯಾ. ಕಾಮೇಶ್ವರ ರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಂಜಿಎಂ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟ ಉದ್ಘಾಟನೆ ಶನಿವಾರ ಸಂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ವಕೀಲರು ಹಾಗು ನ್ಯಾಯಧೀಶರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಕಾನೂನು ವ್ಯವಸ್ಥೆಯಲ್ಲಿ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗು ಹೈಕೋರ್ಟ್ ನ್ಯಾಯಧೀಶ ನ್ಯಾ.ಕಾಮೇಶ್ವರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಶನಿವಾರ ಸಂಜೆ ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಂಜಿಎಂ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ನ್ಯಾಯವಾದಿಗಳು, ನ್ಯಾಯಧೀಶರು ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ. ಇದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಇದನ್ನು ನಿವಾರಿಸಲು ಸುಲಭ ಮಾರ್ಗ ಎಂದರೆ ಕ್ರೀಡೆ. ವಕೀಲರ ಸಂಘ ಕ್ರೀಡಾ ಪಂದ್ಯಾಟಗಳನ್ನು ನಿರಂತರವಾಗಿ ನಡೆಸುತ್ತಿರಬೇಕು. ಇದರಿಂದ ರಾಜ್ಯ, ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರ ನಡುವೆ ಪರಸ್ಪರ ಸಮನ್ವಯ ಹಾಗು ಸೌಹಾರ್ದ ಬೆಳೆಯುತ್ತದೆ ಎಂದರು.

ಕರ್ನಾಟಕ ಹೈಕೋರ್ಟಿನ ನ್ಯಾಯಧೀಶ ನ್ಯಾ.ರಾಜೇಶ್ ರೈ.ಕೆ ಮಾತನಾಡಿ, ಕ್ರೀಡೆ ಮತ್ತು ನ್ಯಾಯಾಂಗ ವ್ಯವಸ್ಥೆ ಒಂದಕ್ಕೊಂದು ನೇರ ಸಂಬಂಧ ಹೊಂದಿದೆ. ವಕೀಲರು ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಅವರಲ್ಲಿನ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ನ್ಯಾ.ಇ.ಎಸ್.ಇಂದಿರೇಶ್ ಮಾತನಾಡಿ, ನಿತ್ಯವು ಕನಿಷ್ಠ ವ್ಯಾಯಾಮ ಮಾಡಬೇಕಾಗುತ್ತದೆ. ಅದು ಆರೋಗ್ಯಕ್ಕೂ ಉತ್ತಮ ಮತ್ತು ವಕೀಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ ಎಂದು ನುಡಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್.ರಘುನಾಥ್, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, ವಕೀಲರ ಸಂಘದ ಉಪಾಧ್ಯಕ್ಷ, ಕ್ರೀಡಾಕೂಟದ ಸಂಚಾಲಕ ಮಿತ್ರಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ನ್ಯಾಯವಾದಿ ವಿಜಯ ಕುಮಾರ್ ಶೆಟ್ಟಿ ನಾಡಗೀತೆ ಹಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ಹಿರಿಯ ನ್ಯಾಯವಾದಿ ಮೇರಿ ಎ.ಆರ್.ಶ್ರೇಷ್ಠಾ ನಿರೂಪಿಸಿದರು.

ಹೊನಲು ಬೆಳಕಿನ ಕ್ರೀಡಾಕೂಟದಲ್ಲಿ 39 ಕ್ರಿಕೆಟ್, 16 ವಾಲಿಬಾಲ್, 10 ತ್ರೋ ಬಾಲ್, 40 ಶಟಲ್‌ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸಿವೆ.