-ಕೆಂಭಾವಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ

---

ಕನ್ನಡಪ್ರಭ ವಾರ್ತೆ ಸುರಪುರ

ಕ್ರೀಡೆಯು ಕೇವಲ ಸೋಲು-ಗೆಲುವಿನ ಸ್ಪರ್ಧೆಯಲ್ಲ, ಅದು ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಕಲಿಸುವ ಶ್ರೇಷ್ಠ ಸಾಧನ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ತಾಲೂಕು ಕ್ರೀಡಾಂಗಣದಲ್ಲಿ ಕೆಂಭಾವಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.


ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ. ಸದೃಢ ಮನಸ್ಸಿನಲ್ಲಿ ಸದೃಢ ದೇಹ ಇರುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ. ಪ್ರತಿದಿನ ಕ್ರೀಡೆ ಹಾಗೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡು ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು. ಶ್ರದ್ಧೆಯಿಂದ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹ ಮತ್ತು ಮನಸ್ಸು ಆರೋಗ್ಯವಾಗಿರುತ್ತದೆ. ಶಿಸ್ತು, ಒಗ್ಗಟ್ಟು, ಆತ್ಮವಿಶ್ವಾಸ ಹಾಗೂ ಏಕಾಗ್ರತೆ ಬೆಳೆಯುತ್ತದೆ. ತಮಗೆ ಆಸಕ್ತಿ ಇರುವ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಶಾಲೆ, ಊರು ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು. ಹೋಬಳಿ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ದರಬಾರಿ ಮಾತನಾಡಿ, ನಿಯಮಿತ ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಮಾನಸಿಕ ಏಕಾಗ್ರತೆ, ತಂಡದ ಸಹಕಾರ ಮನೋಭಾವ, ಶಿಸ್ತು ಹಾಗೂ ಪರಿಶ್ರಮದ ಗುಣಗಳು ಬೆಳೆಯುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭೀಮರಾಯ ಗೋಪಾಲ ವಹಿಸಿದ್ದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಮರೆಪ್ಪನಾಯಕ ಗುಡ್ಡಕಾಯಿ, ಗ್ರೇಡ್–1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ, ಅನುದಾನಿತ ಶಾಲೆ-ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು, ದೈಹಿಕ ಶಿಕ್ಷಕರು, ಸಿಬ್ಬಂದಿ, ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಶಿಕ್ಷಕ ಸಿದ್ದು ಸಾಲಿ ನಿರೂಪಿಸಿದರು. ಟಿ.ಎಚ್. ಪಾಟೀಲ ವಂದಿಸಿದರು.

-

15ವೈಡಿಆರ್14 : ಸುರಪುರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕೆಂಭಾವಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಅವರು ಉದ್ಘಾಟಿಸಿದರು.

ದೈಹಿಕ ಶಿಕ್ಷಣಾಧಿಕಾರಿ ಭೀಮರಾಯ ಗೋನಾಲ, ಮುಖ್ಯ ಅಧೀಕ್ಷಕರು ಮರೆಪ್ಪನಾಯಕ ಗುಡ್ಡಕಾಯಿ ಸೇರಿದಂತೆ ಇತರರು ಇದ್ದರು.