ಕ್ರೀಡೆ ಯುವಕರಲ್ಲಿ ಶಿಸ್ತು, ಸಮರ್ಪಣೆ, ನಾಯಕತ್ವ ಮತ್ತು ತಂಡದ ಮನೋಭಾವ ಬೆಳೆಸುವುದರ ಜತೆಗೆ, ಅವರಲ್ಲಿರುವ ಪ್ರತಿಭೆ ಗುರುತಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಉತ್ತಮ ವೇದಿಕೆ ಎಂದು ಖಾಜಾ ಬಂದಾನವಾಜ ವಿವಿ ಕ್ಯಾಂಪಸ್‌ ನಿರ್ದೇಶಕ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಕ್ರೀಡೆ ಯುವಕರಲ್ಲಿ ಶಿಸ್ತು, ಸಮರ್ಪಣೆ, ನಾಯಕತ್ವ ಮತ್ತು ತಂಡದ ಮನೋಭಾವ ಬೆಳೆಸುವುದರ ಜತೆಗೆ, ಅವರಲ್ಲಿರುವ ಪ್ರತಿಭೆ ಗುರುತಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಉತ್ತಮ ವೇದಿಕೆ ಎಂದು ಖಾಜಾ ಬಂದಾನವಾಜ ವಿವಿ ಕ್ಯಾಂಪಸ್‌ ನಿರ್ದೇಶಕ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಹೇಳಿದರು.ನಗರದ ಸಂಗತ್ರಾಸ್‌ವಾಡಿ ಬಳಿಯ ಕೆಬಿಎನ್‌ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ಕೆಬಿಎನ್ ಫುಟಬಾಲ್‌ ಗೋಲ್ಡ್ ಕಪ್ 2026 ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ರಿಕೆಟ್, ಹಾಕಿ ಹಾಗೂ ಫುಟ್‌ಬಾಲ್ ಪಂದ್ಯಾವಳಿಗಳನ್ನು ಒಳಗೊಂಡಿರುವ ಈ ಕ್ರೀಡಾಕೂಟವು 2012 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದ್ದು, ಯುವ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತದೆ. ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಕ್ರೀಡಾ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ವೇದಿಕೆ, ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.ತಮ್ಮ ತಂದೆ ಹಾಗೂ ಕೆಬಿಎನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕುಲಪತಿ ದಿವಂಗತ ಡಾ. ಸೈಯದ್ ಶಾ ಖುಸ್ರೋ ಹುಸೇನಿ ಅವರ ಕ್ರೀಡಾ ಪ್ರೋತ್ಸಾಹದ ಕನಸನ್ನು ಮುಂದುವರಿಸುವುದು ನನ್ನ ಆಶಯವಾಗಿದೆ. ಸಂಸ್ಥೆಯ ಅಧ್ಯಕ್ಷ ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಇಂತಹ ಕ್ರೀಡಾ ಚಟುವಟಿಕೆಗಳು ಮುಂದುವರಿಯುತ್ತಿವೆ ಎಂದು ಹೇಳಿದರು.ಕ್ರೀಡಾಪಟುಗಳು ಗೆಲುವು-ಸೋಲಿಗಿಂತ ಕ್ರೀಡಾಸ್ಫೂರ್ತಿಗೆ ಹೆಚ್ಚಿನ ಮಹತ್ವ ನೀಡಬೇಕು. ಎದುರಾಳಿಗಳು, ತರಬೇತುದಾರರು ಮತ್ತು ಅಧಿಕಾರಿಗಳನ್ನು ಗೌರವಿಸುವುದರೊಂದಿಗೆ ಶಿಸ್ತು ಹಾಗೂ ಸಮರ್ಪಣೆಯಿಂದ ಆಡಬೇಕು. ಈ ವೇದಿಕೆ ಬಳಸಿಕೊಂಡು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ, ಜಿಲ್ಲೆ, ರಾಜ್ಯ ಹಾಗೂ ದೇಶ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಿದರು.ಎಂ.ಎ. ಪಠಾಣ್ ಮಾತನಾಡಿ, ಶಿಸ್ತು, ಸಮರ್ಪಣೆ ಹಾಗೂ ಪ್ರತಿಭೆ ಕ್ರೀಡಾಪಟುಗಳನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದರು. ಈ ಪಂದ್ಯಾವಳಿಯಲ್ಲಿ 17 ವರ್ಷ ವಯೋಮಿತಿಯ ಬಾಲಕರ ಫುಟ್‌ಬಾಲ್ ಟೂರ್ನಮೆಂಟ್‌ ನ.3 ರಿಂದ ನ.6 ರ ವರಗೆ ಹಾಗೂ 16 ವರ್ಷ ವಯೋಮಿತಿಯ ಬಾಲಕರ ಕ್ರಿಕೆಟ್ ಟೂರ್ನಮೆಂಟ್ ನ.15 ರಿಂದ ನ.29ರ ವರೆಗೆ, 17 ವರ್ಷ ವಯೋಮಿತಿಯ ಬಾಲಕರ ಹಾಕಿ ಟೂರ್ನಮೆಂಟ್ ಡಿ. 1 ರಿಂದ ಡಿ. 4ರ ವರೆಗೆ (4 ದಿನಗಳ ಕಾಲ) ನಡೆಯಲಿದೆ. ಸರಣಿ ಪುರುಷ, ಬೆಸ್ಟ್ ಗೋಲ್‌ ಕೀಪರ್‌, ಪಂದ್ಯ ಪುರುಷ ಪ್ರಶಸ್ತಿಗಳನ್ನು ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ ಮತ್ತು ಕೆಬಿಎನ ಟ್ರೋಫಿ ನೀಡಲಾಗುವುದು. ಪ್ರತಿ ಮ್ಯಾಚ್‌ನ ನೇರ ಪ್ರಸಾರ, ಮೈದಾನದಲ್ಲಿ ಎಲ್‌ಇಡಿ ಸ್ಕ್ರೀನ್, ರಿಪ್ಲೇಸ್, ಥರ್ಡ್ ಅಂಪೈರ್ ಸೌಲಭ್ಯ, ರನ್ನಿಂಗ್ ಕಾಮೆಂಟರಿ.2013 ರಲ್ಲಿ ಬೆಂಗಳೂರಿನ ಎಎಸ್‌ಸಿ ಸೆಂಟರ್ ತಂಡವು ವಿಜೇತರಾಗಿದ್ದರೆ, ವಿದ್ಯಾನಗರದ ಸರ್ಕಾರಿ ಪ್ರೌಢಶಾಲೆ ತಂಡವು ರನ್ನರ್-ಅಪ್ ಪ್ರಶಸ್ತಿಯನ್ನು ಪಡೆಯಿತು. 2017ರಲ್ಲಿ ಎಎಸ್‌ಸಿ ಸೆಂಟರ್, ಬೆಂಗಳೂರು ತಂಡವು ಮತ್ತೊಮ್ಮೆ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಬೆಂಗಳೂರಿನ ಎಸ್ಎಸ್ವಿ ತಂಡವು ರನ್ನರ್-ಅಪ್ ಆಗಿದೆ. 2022ರಲ್ಲಿ ಪಂಜಾಬ್‌ನ ರೌಂಡ್ ಗ್ಲಾಸ್ ಪಂಜಾಬ್ ಫುಟ್‌ಬಾಲ್ ಕ್ಲಬ್ ವಿಜೇತರಾಗಿ ಹೊರಹೊಮ್ಮಿತು ಹಾಗೂ ಬಳ್ಳಾರಿಯ ಡಿವೈಎಸ್ ತಂಡ ರನ್ನರ್-ಅಪ್ ಸ್ಥಾನ ಪಡೆದಿದೆ.ಬೆನ್ನಿ ಕುರಿಯಾಕೋಸ ಸ್ವಾಗತಿಸಿದರು. ಡಾ.ಸನಾ ಇಜಾಜ ವಂದಿಸಿದರು. ವೈದ್ಯಕೀಯ ಇಂಟರ್ನ್ ಫೈಜಾ ರೆಹಮತ್ ನಿರೂಪಿಸಿದರು. ಕೆಬಿಎನ್ ವಿವಿ ಉಪಕುಲಪತಿ ಅಶ್ಫಾಕ್ ಅಹ್ಮದ್, ಕುಲಸಚಿವ ವಿಲಾಯತ್ ಅಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ತಂಡಗಳ ಆಟಗಾರರು ಹಾಗೂ ಕ್ರೀಡಾ ಅಭಿಮಾನಿಗಳು ಪಾಲ್ಗೊಂಡಿದ್ದರು. www.youtube.com/kbnhouseofsports/live ಲಿಂಕ್‌ ಬಳಸಿ ಎಲ್ಲ ಮ್ಯಾಚಗಳ ನೇರ ಪ್ರಸಾರ ವೀಕ್ಷಿಸಬಹುದು.

----ಫೋಟೊ-----

ಫೋಟೋ- ಗೋಲ್ಡ್‌ ಕಪ್‌ 1 ಮತ್ತು ಗೋಲ್ಡ್‌ ಕಪ್‌ 2

ಕೆಬಿಎನ್‌ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ಕೆಬಿಎನ್ ಫುಟಬಾಲ್‌ ಗೋಲ್ಡ್ ಕಪ್ 2026 ಕ್ರೀಡಾಕೂಟಕ್ಕೆ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಚಾಲನೆ ನೀಡಿದರು.