ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಮಾಜಕ್ಕೆ ಉತ್ತಮ ಕೆಲಸ ಸೇವೆ ಸಲ್ಲಿಸಲು ವ್ಯಕ್ತಿಗೆ ಆರೋಗ್ಯ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಮನೋರಂಜನೆ ನೀಡಲು ಕ್ರೀಡೆ ಮುಖ್ಯ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅಭಿಪ್ರಾಯ ಪಟ್ಟರು.ನಗರ ಹೊರವಲಯದ ಕೆ.ವಿ.ಕ್ಯಾಂಪಸ್‌ನಲ್ಲಿ ಜಿಲ್ಲಾ ವಕೀಲರ ಸಂಘ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಸೋಮವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕೀಡಾಕೂಟ 2025ನ್ನು ಉದ್ಘಾಟಿಸಿ ಮಾತನಾಡಿದರು.
ಒತ್ತಡ ನಿವಾರಣೆಗೆ ಸಹಕಾರಿಎಲ್ಲರೂ ಸಹಜವಾಗಿ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಒತ್ತಡಕ್ಕೆ ಸಿಲುಕಿರುತ್ತೇವೆ. ಒತ್ತಡ ಕಡಿಮೆ ಮಾಡಿ ಕೊಳ್ಳಲು ಕ್ರೀಡೆ ಬಹು ಮುಖ್ಯ, ಕ್ರೀಡೆಯಿಂದ ಶರೀರ ಮತ್ತು ಮನಸ್ಸು ಗಟ್ಟಿಗೊಳಿಸಿ, ಪರೋಪಕಾರಂ ಇದಂ ಶರೀರಂ ಎಂಬಂತೆ ದೇಶ ಸೇವೆ ಮಾಡಬೇಕು. ದೇಶ ಸೇವೆಯೇ ಈಶ ಸೇವೆ. ಕ್ರೀಡೆ ಅಥವಾ ಜೀವನದಲ್ಲಿ ಸೋತವರು ಸೋಲುತ್ತಲೇ ಇರಬೇಡಿ. ಗೆಲ್ಲಲು ಪ್ರಯತ್ನಿಸಿ, ಸೋಲೆ ಗೆಲುವಿನ ಸೋಪಾನ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಶಾಲಾ ಕಾಲೇಜು ದಿನಗಳಲ್ಲಿ ದೈಹಿಕ ದೃಡತೆಗೆ ಆದ್ಯತೆ ಕೊಡುವ ನಾವು ನಂತರ ಉದಾಸೀನತೆಯಿಂದ ಮತ್ತು ಕೆಲಸದ ಒತ್ತಡದಲ್ಲಿ ಮರೆಯುತ್ತೇವೆ. ದೈಹಿಕ ಮತ್ತು ಮಾಸಿಕ ದೃಡತೆಗೆ ಕ್ರೀಡೆ ವ್ಯಾಯಾಮ ಮನುಷ್ಯನಿಗೆ ಅಗತ್ಯವಿದೆ ಎಂದು ಹೇಳಿದರು.ಮಾನಸಿಕ ಸದೃಢತೆ ಮುಖ್ಯ
ದೈಹಿಕ ದೃಢತೆಗಿಂತ ಮಾನಸಿಕ ದೃಡತೆ ಅತ್ಯಗತ್ಯವಾಗಿ ಬೇಕಾಗಿದೆ. ಮಾನಸಿಕ ದೃಡತೆಯಿಂದ ಪರಸ್ಪರ ಹೊಂದಾಣಿಕೆ ಸಾಮರಸ್ಯ ಎರ್ಪಟ್ಟು, ಯಾವುದೇ ತಂಡವಾಗಿ ಆಡುವ ಕ್ರೀಡೆಯಲ್ಲಿ ಗೆಲುವು ಸಾದ್ಯವಾಗುತ್ತದೆ ಎಂದರು. ಕ್ರೀಡೆಯಲ್ಲಿ ಬಾಗವಹಿಸಿದ ಎಲ್ಲರೂ ಗೆಲುವು ಸಾಧಿಸಲು ಸಾದ್ಯವಿಲ್ಲ , ಒಬ್ಬರಿಗೆ ಮಾತ್ರ ಗೆಲ್ಲು ಅವಕಾಶ ವಿರುತ್ತದೆ. ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಸೋಲನ್ನು ಸ್ವೀಕರಿಸುವ ಕ್ರೀಡಾ ಸ್ಫೂರ್ತಿ ಬೆಳಸಿಕೊಳ್ಳ ಬೇಕು ಎಂದು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಮಾತನಾಡಿ, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಒತ್ತಡದ ವಾತಾವರಣದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಆರೋಗ್ಯದ ಬದುಕನ್ನು ಸಾಗಿಸಲು ಕ್ರೀಡೆ ಸಹಕಾರಿಯಾಗಿದೆ. ಮನುಷ್ಯ ಸದೃಢ ಹಾಗೂ ಆರೋಗ್ಯಕರವಾಗಿದ್ದಾಗ ಮಾತ್ರ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯ ಎಂದರು.ಭಾಗವಹಿಸುವುದು ಮುಖ್ಯ
ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಕ್ರೀಡೆಯನ್ನು ತಮ್ಮ ದಿನಿತ್ಯದ ಚಟುವಟಿಕೆಯಾಗಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಬದಲಾಗಿ ಭಾಗವಹಿಸುವುದು ಬಹು ಮುಖ್ಯವಾಗಿರುತ್ತದೆ. ವಕೀಲ ವೃತ್ತಿಯಲ್ಲಿ ಕ್ರೀಡಾಸ್ಫೂರ್ತಿ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.ಈ ಸಂಧರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರುಗಳಾದ ಕಾಂತರಾಜು, ಶ್ರೀಧರ್, ಉಮೇಶ್, ಭಾರತಿ, ಲತಾಕುಮಾರಿ, ಮಾನಸಶೇಖರ್,ಶಾರದ, ಪ್ರೇಮ್ ಕುಮಾರ್, ವರ್ಣಿಕಾ, ಜಿಲ್ಲಾವಕೀಲರ ಸಂಘದ ಉಪಾಧ್ಯಕ್ಷ ಎಚ್.ಮುನಿರಾಜು, ಖಜಾಂಚಿ ರಘುಕಾಂತ್. ಕ್ರೀಡಾಸಮಿತಿಯ ಅಧ್ಯಕ್ಷ ಪಿ.ಸುಭ್ರಮಣಿ, ವಕೀಲರಾದ ನವೀನ್, ಮುರಳಿಮೋಹನ್,ಮುನಿರಾಜು, ರುಕ್ಮಿಣಿ, ಸೇರಿದಂತೆ ಜಿಲ್ಲೆಯ ವಕೀಲರು, ನ್ಯಾಯಾಲಯಗಳ ಸಿಬ್ಬಂದಿ ಮತ್ತಿತರ ವಕೀಲರು ಇದ್ದರು.