ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯ

| Published : Jan 20 2024, 02:04 AM IST

ಸಾರಾಂಶ

ಮಕ್ಕಳಿಗೆ ಶಿಕ್ಷಣವೇ ಎನ್ನುವುದು ಮನೆಯಿಂದಲೇ ಶುರುವಾಗುತ್ತದೆ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎಂದು ಹೇಳುತ್ತಾ ತಾಯಿಯ ಪಾತ್ರದ ಮಹತ್ವ

ಹಾವೇರಿ: ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹತ್ತು ಬಾವಿಗೆ ಒಂದು ಕೆರೆ ಸಮ, ಹತ್ತು ಕೆರೆಗೆ ಒಂದು ಸರೋವರ ಸಮ. ಹತ್ತು ಸರೋವರಕ್ಕೆ ಒಬ್ಬ ಮಗ ಸಮ. ಹತ್ತು ಮಕ್ಕಳಿಗೆ ಒಂದು ಮರ ಸಮ. ಹೀಗೆ ಮರ-ಗಿಡಗಳು ಪರಿಸರ ಸಂರಕ್ಷಣೆಯಲ್ಲಿ ಮತ್ತು ಆಹಾರ ನೆರಳಿನ ಮೂಲಕ ಆಶ್ರಯ ತಾಣಗಳಾಗಿವೆ. ಮರಗಳು ಮಾಡುವ ಕೆಲಸವನ್ನು ಮಠಗಳು ಮಾಡುತ್ತಿವೆ. ಮರ-ಮಠಗಳಿಗೆ ಹೆಚ್ಚಿನ ವ್ಯತ್ಯಾಸವಿಲ್ಲ. ಮರ ಶಬ್ದದ ಒಳಗೆ ಒಂದು ಬಿಂದು ಬಿಟ್ಟರೆ ಮಠವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಹಾವೇರಿ ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯ. ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಸ್ವಾಮೀಜಿಯವರ ಶ್ರಮ ಬಹಳ ಇದೆ ಎಂದರು.

ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಸಿದ್ದನಗೌಡ್ರ ಮಾತನಾಡಿ, ಮಕ್ಕಳಿಗೆ ಶಿಕ್ಷಣವೇ ಎನ್ನುವುದು ಮನೆಯಿಂದಲೇ ಶುರುವಾಗುತ್ತದೆ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎಂದು ಹೇಳುತ್ತಾ ತಾಯಿಯ ಪಾತ್ರದ ಮಹತ್ವ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಜಿ.ಆರ್. ಹಿರೇಮಠ, ಡಾ. ದೀಪಾ ಎಂ.ಎನ್., ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸರಸ್ವತಿ ಹಿರೇಮಠ, ಲಕ್ಷ್ಮೀ ಮಳಗಾವಿ ನಿರೂಪಿಸಿ, ಶಹಜಾಬಾನು ಸ್ವಾಗತಿಸಿದರು. ಕಾವ್ಯ ಕೊರಕ್ಕನವರ ವಂದಿಸಿದರು.