ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ

| Published : Nov 20 2025, 01:00 AM IST

ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಪ್ರತಿ ಸಮಸ್ಯೆಗಳಿಗೆ ಪೊಲೀಸ್ ಇಲಾಖೆಯ ಅಗತ್ಯತೆ ಇದೆ

ಬಳ್ಳಾರಿ: ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡ ನಿವಾರಿಸಿಕೊಂಡು ಆರೋಗ್ಯ ವೃದ್ಧಿಯಾಗಿಸಿಕೊಳ್ಳಬೇಕು ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್. ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನ.21ರವರೆಗೆ ನಡೆಯುವ ವಾರ್ಷಿಕ ಕ್ರೀಡಾಕೂಟಗಳಿಗೆ ಪಾರಿವಾಳ ಮತ್ತು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಡಾ.ಶೋಭಾರಾಣಿ, ಸಾರ್ವಜನಿಕರ ಪ್ರತಿ ಸಮಸ್ಯೆಗಳಿಗೆ ಪೊಲೀಸ್ ಇಲಾಖೆಯ ಅಗತ್ಯತೆ ಇದೆ ಎಂದರು. ಕಳೆದ ಬಾರಿಯ ವಾರ್ಷಿಕ ಕ್ರೀಡಾಕೂಟದ ಚಾಂಪಿಯನ್ ಆಗಿದ್ದ ಕೃಷ್ಣನಾಯಕ್ ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ನೀಡಿ ಬೆಳಗಿಸಿದರು.

ಆಕರ್ಷಕ ಪಥಸಂಚಲನ:

ಬಳ್ಳಾರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025ರ ಅಂಗವಾಗಿ ಬಳ್ಳಾರಿ ಉಪವಿಭಾಗದ ತುಂಗಾ ತಂಡ, ಬಳ್ಳಾರಿ ನಗರ ಕೋಟೆ ತಂಡ, ಮಹಿಳಾ ವಿಭಾಗದ ದುರ್ಗಾ ತಂಡ, ಸಿರುಗುಪ್ಪ ಉಪ ವಿಭಾಗದ ವೇದಾವತಿ ತಂಡ, ತೋರಣಗಲ್ಲು ಉಪ ವಿಭಾಗದ ಸ್ಕಂದಗಿರಿ ತಂಡ, ಸಂಸ್ಕೃತಿ ತಂಡ ಒಟ್ಟು 6 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಪೊಲೀಸ್ ಪುರುಷ ಸಿಬ್ಬಂದಿಗಾಗಿ 800 ಮೀಟರ್ ಓಟ, ಪುರುಷ ಮತ್ತು ಮಹಿಳಾ ಸಿಬ್ಬಂದಿಗಾಗಿ 100 ಮೀಟರ್ ಓಟ, ಉದ್ದ ಜಿಗಿತ, ಪುರುಷರಿಗಾಗಿ ಜಾವೆಲಿನ್ ಥ್ರೋ, ಕಬ್ಬಡ್ಡಿ, ಟಾಗ್ ಆಪ್ ವಾರ್, ಇತರೆ ಸ್ಪರ್ಧೆಗಳು.

ಪೊಲೀಸ್ ಅಧಿಕಾರಿಗಳಿಗಾಗಿ 100 ಮೀಟರ್ ವಾಕ್, ಗುಂಡು ಎಸೆತ, ಎತ್ತರ ಜಿಗಿತ, ಜಾವೆಲಿನ್ ಥ್ರೋ, ವಾಲಿವಾಲ್, 100 ಮೀಟರ್ ಓಟ, 400 ಮೀಟರ್ ಓಟ ಮತ್ತು ಇತರೆ ಸ್ಪರ್ಧೆಗಳು. ಗುಂಪು ಸ್ಪರ್ಧೆಗಳಲ್ಲಿ ಕಬಡ್ಡಿ, ವಾಲಿಬಾಲ್, ಮ್ಯೂಜಿಕಲ್ ಚೇರ್, ಲೆಮನ್ ಸ್ಪೂನ್, ಇತರೆ ಸ್ಪರ್ಧೆ ಆಯೋಜಿಸಲಾಗಿತ್ತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನವೀನಕುಮಾರ್, ಕೆ.ಪಿ. ರವಿಕುಮಾರ್ ಉಪಸ್ಥಿತರಿದ್ದರು.

ವೇದಿಕೆ ಹತ್ತದ ಹೆಚ್ಚುವರಿ ಎಸ್ಪಿ ರವಿಕುಮಾರ್ ;

ಎಸ್ಪಿ-ಎಎಸ್ಪಿ ನಡುವಿನ ಮುನಿಸು ಬಹಿರಂಗ:

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಹೆಚ್ಚುವರಿ ಎಸ್ಪಿ ರವಿಕುಮಾರ್ ವೇದಿಕೆ ಹತ್ತದೇ ದೂರ ಉಳಿದರು. ಕಾರ್ಯಕ್ರಮಕ್ಕೆ ನಿಗದಿತ ಸಮಯದೊಳಗೆ ಹಾಜರಿದ್ದರೂ ವೇದಿಕೆಗೆ ತೆರಳದೇ ತಮ್ಮ ಕೆಳ ಹಂತದ ಅಧಿಕಾರಿಗಳು ಕೂತಿದ್ದ ಗ್ಯಾಲರಿಯಲ್ಲಿ ಪ್ರತ್ಯೇಕ ಆಸನದಲ್ಲಿ ಕುಳಿತಿದ್ದರು.

ಎಸ್ಪಿ, ಎಎಸ್ಪಿ ನಡುವಿನ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣ ಎಂಬ ಮಾತು ಕೇಳಿ ಬಂತು. ಈ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಡಾ.ಶೋಭಾರಾಣಿ, ಎಎಸ್ಪಿ ರವಿಕುಮಾರ್ ಮುಖ್ಯ ಅತಿಥಿಯಲ್ಲ. ಅವರನ್ನು ನಾವೇನು ಕರೆಯಬೇಕಾಗಿಲ್ಲ. ಅವರೇ ಕಾರ್ಯಕ್ರಮ ಆಯೋಜಕರು. ಅವರೇ ಬಂದು ಕೂಡಬೇಕಿತ್ತು. ಮತ್ತೊಬ್ಬ ಎಎಸ್ಪಿ ನವೀನಕುಮಾರ್ ವೇದಿಕೆಯಲ್ಲಿಯೇ ಇದ್ದರು. ಅವರು ಇರಬಹುದು ಎಂದುಕೊಂಡಿದ್ದೆ. ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿದ್ದು ಏಕೆ ಎಂದು ನನಗೂ ಗೊತ್ತಿಲ್ಲ ಎಂದರು.