ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ಡಿಸಿ ನಲಿನ್ ಅತುಲ್

| Published : Jan 21 2025, 12:32 AM IST

ಸಾರಾಂಶ

ಮನಸ್ಸಿನ ಒತ್ತಡ ನಿವಾರಣೆಗೆ ನಿತ್ಯ ಕ್ರೀಡೆಯಲ್ಲಿ ಭಾಗಿಯಾಗುವುದು ಸಹಕಾರಿಯಾಗಿದೆ.

4ನೇ ಜಿಲ್ಲಾ ಮಟ್ಟಡ ಕ್ರೀಡಾಕೂಟ ಉದ್ಘಾಟನೆ ಕನ್ನಡಪ್ರಭ ವಾರ್ತೆ ಕೊಪ್ಪಳ

ಮನಸ್ಸಿನ ಒತ್ತಡ ನಿವಾರಣೆಗೆ ನಿತ್ಯ ಕ್ರೀಡೆಯಲ್ಲಿ ಭಾಗಿಯಾಗುವುದು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್‌ ಅತುಲ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘ ಹಾಗೂ ಇಲಾಖೆಯ ಎಲ್ಲ ವೃಂದ ಸಂಘಗಳು ಜಿಲ್ಲಾ ಘಟಕ ಹಾಗೂ ಜಿಪಂನ ಸಹಯೋಗದಲ್ಲಿ ನಡೆದ ೪ನೇ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆಯಿಂದ ದೇಹ ಹಾಗು ಮನಸ್ಸು ಸದೃಡ ಆಗುತ್ತದೆ. ಕ್ರೀಡೆಯಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ. ಎಲ್ಲರೂ ನಿತ್ಯ ಜೀವನದಲ್ಲಿ ಕ್ರೀಡಾಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಆರ್‌ಡಿಪಿಆರ್ ನೌಕರರು, ಸಿಬ್ಬಂದಿ ನಿತ್ಯ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಒತ್ತಡದಿಂದ ಹೊರಬರಲು ಕ್ರೀಡಾಕೂಟ ಸಹಕಾರಿಯಾಗಿವೆ. ಎಲ್ಲ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆಯಬೇಕು. ಕ್ರೀಡಾಕೂಟದಿಂದ ಎಲ್ಲರೂ ಒಂದೆಡೆ ಸೇರಲು ಅವಕಾಶ ದೊರೆತಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯ ಅಲ್ಲ, ಪಾಲ್ಗೊಳ್ಳುವುದು ಪ್ರಮುಖವಾಗಿರುತ್ತದೆ ಎಂದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆಗಳ ಪಾತ್ರ ಬಹುಮುಖ್ಯ. ಹೀಗಾಗಿ ನೌಕರರು, ಸಿಬ್ಬಂದಿ ನಿತ್ಯದ ಕೆಲಸದ ಜೊತೆ ಬೆಳಗಿನ ಸಮಯದಲ್ಲಿ ಕ್ರೀಡಾಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲ ಆಗುತ್ತದೆ.

ಎಲ್ಲ ನೌಕರರು ಪ್ರತಿದಿನ ಯೋಗ, ವ್ಯಾಯಾಮ, ಕ್ರೀಡಾಕೂಟ ಅಭ್ಯಾಸ ರೂಢಿಸಿಕೊಳ್ಳಬೇಕು. ಉತ್ತಮ ಹವ್ಯಾಸಗಳು ಇದ್ದರೆ ಕುಟುಂಬ ಹಾಗೂ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದರು.

ಡಿಎಫ್‌ಒ ಕಾವ್ಯಾ ಚತುರ್ವೇದಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಜೀವನದಲ್ಲಿ ಶಿಸ್ತು, ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.

ರಕ್ತದಾನ ಶಿಬಿರ:

೪ನೇ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕೆಲ ನೌಕರರು, ಸಿಬ್ಬಂದಿ ರಕ್ತದಾನ ಮಾಡಿದರು.

ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ್, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಸಹಾಯಕ ಕಾರ್ಯದರ್ಶಿ ಶರಣು ಪೂಜಾರ, ತಾಪಂ ಇಒ ಲಕ್ಷ್ಮೀದೇವಿ ಯಾದವ್, ದುಂಡಪ್ಪ ತುರಾದಿ, ಸಂತೋಷ ಬಿರಾದಾರ್, ರಾಜಶೇಖರ ಕೆ., ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರು ಸೇರಿ ಜಿಪಂ, ತಾಪಂ, ಗ್ರಾಪಂ ಹಂತದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಎಲ್ಲಾ ಯೋಜನೆಗಳ ಸಂಯೋಜಕರಿದ್ದರು.