ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ. ಯಾವುದೇ ಸ್ಪರ್ಧೆಯಲ್ಲಿ ನಾವು ಜಯಶೀಲರಾಗಲು ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ ಎಂದು ಹಾವೇರಿ ಶಹರ ಠಾಣೆ ಇನ್ಸಪೆಕ್ಟರ್ ಸಿದ್ಧಾರೂಢ ಬಡಿಗೇರ ಹೇಳಿದರು.
ಹಾವೇರಿ:ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ. ಯಾವುದೇ ಸ್ಪರ್ಧೆಯಲ್ಲಿ ನಾವು ಜಯಶೀಲರಾಗಲು ನಿರಂತರ ಪ್ರಯತ್ನ, ಪರಿಶ್ರಮ ಅಗತ್ಯ ಎಂದು ಹಾವೇರಿ ಶಹರ ಠಾಣೆ ಇನ್ಸಪೆಕ್ಟರ್ ಸಿದ್ಧಾರೂಢ ಬಡಿಗೇರ ಹೇಳಿದರು.
ಇಲ್ಲಿಯ ಬಿಎಂ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾಧನೆಯ ಶಿಖರ ಏರಬೇಕಾದರೆ ಪ್ರಯತ್ನವೆಂಬ ಮೆಟ್ಟಿಲುಗಳನ್ನು ಹತ್ತಲೇಬೇಕು. ಜೀವನದಲ್ಲಿ ಯಶಸ್ಸು ಗಳಿಸಲು ಪರಿಶ್ರಮ ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಓದಿನೊಂದಿಗೆ ಓಟೋಟದಲ್ಲಿ ಕೂಟ ಪಾಲ್ಗೊಳ್ಳುವುದು ಅಗತ್ಯ ಎಂದು ಹೇಳಿದರು. ಕನಕ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮಾ. ನಾಗರಾಜ ಮಾತನಾಡಿ, ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಕ್ರೀಡೆಯು ಮಕ್ಕಳಿಗೆ ಆಂತರಿಕವಾಗಿ ಬಾಹ್ಯವಾಗಿ ಸದೃಢವಾಗಿರಲು ಮುಖ್ಯವಾಗಿದೆ. ಹಾಗಾಗಿ ನಮ್ಮ ಶಾಲೆಯಲ್ಲಿ ಮುಂದಿನ ವರ್ಷ ಎನ್‌ಸಿಸಿ ಘಟಕ ಆರಂಭಿಸಿ ಮಕ್ಕಳಿಗೆ ಅನುಕೂಲ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವನೀಡಿ ವಿದ್ಯಾರ್ಥಿಗಳನ್ನು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸುವಂತೆ ತಯಾರು ಮಾಡುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯಲ್ಲಿ ಕ್ರೀಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ನಿವೃತ್ತ ಐಪಿಎಸ್ ಅಧಿಕಾರಿ ಎಂ.ಆರ್.ಪೂಜಾರ ಕ್ರೀಡಾ ಜ್ಯೋತಿ ಬೆಳಗಿದರು.ಮೇರಿ ಸಿ.ಎಲ್. ಹಾಗೂ ಮಂಜುನಾಥ ನಿರೂಪಿಸಿದರು. ಕ್ರೀಡಾ ಚಟುಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.