ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಕ್ರೀಡೆಯೂ ಮುಖ್ಯ. ಕ್ರೀಡೆಯನ್ನು ಅವಿಭಾಜ್ಯ ಅಂಗವಾಗಿಸಿಕೊಂಡರೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.ಪಟ್ಟಣದ ಕುದರಗುಂಡಿ ಕಾಲೋನಿಯಲ್ಲಿರುವ ನಳಂದ ವಿದ್ಯಾ ಪೀಠದಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ ಉದ್ಘಾಟಿಸಿ ಮಾತನಾಡಿದರು. ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳು ಪಠ್ಯ ವಿಷಯದೊಂದಿಗೆ ಕ್ರೀಡೆಗಳತ್ತಲೂ ಆಸಕ್ತಿ ವಹಿಸಬೇಕು. ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದಲ್ಲದೆ, ಮಾನಸಿಕವಾಗಿಯೂ ಕ್ರಿಯಾಶೀಲರಾಗಬಹುದು. ಶಿಕ್ಷಣದೊಂದಿಗೆ ಕ್ರೀಡೆಯನ್ನು ರೂಢಿಸಿಕೊಂಡ ಜಿಲ್ಲೆಯ ಎಷ್ಟೋ ಮಂದಿ ದೊಡ್ಡ ಹುದ್ದೆಯಲ್ಲಿದ್ದಾರೆ ಎಂದರು.
ಪರೀಕ್ಷೆಗಳು ಸಮೀಪಿಸುತ್ತಿರುವ ದಿನಗಳಲ್ಲಿ ಓದಿನತ್ತ ಎಲ್ಲರೂ ಗಮನಹರಿಸಬೇಕು. ಉತ್ತಮವಾಗಿ ಕಲಿತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತಹ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಗತ್ಯ. ಐಎಎಸ್, ಐಪಿಎಸ್, ಐಎಫ್‌ಎಸ್, ಕೆಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ನಾಡು ಮತ್ತು ದೇಶಕ್ಕೆ ಏನಾದರೂ ಕೊಡುಗೆ ನೀಡುವಂತೆ ಸಲಹೆ ನೀಡಿದರು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಫೇಲಾದವರು ದೃತಿಗೆಡುವುದು ಬೇಡ. ಆತ್ಮಹತ್ಯೆ ಹಾದಿಯನ್ನು ಯಾರೂ ತುಳಿಯಬಾರದು. ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕು. ಜೀವನ ಬಹಳ ಅಮೂಲ್ಯವಾದುದು. ಅದನ್ನು ಕಳೆದುಕೊಳ್ಳದೆ ಅದನ್ನು ನಂದನವನವನ್ನಾಗಿಸಿಕೊಂಡು ಸಾರ್ಥಕ ಬದುಕು ನಡೆಸಬೇಕು ಎಂದರು.
ಪೋಷಕರು ವಿದ್ಯಾರ್ಥಿಗಳಿಗೆ ಸಂಸ್ಕಾರದ ಜೊತೆ ಸಂಸ್ಕೃತಿಯನ್ನೂ ಕಲಿಸಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿದಾಗ ಅವರ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನೆರವಾಗುವುದು. ಸದೃಢ ಸಮಾಜಕ್ಕೂ ಸಹಕಾರಿಯಾಗುತ್ತದೆ ಎಂದರು.ನಿವೃತ್ತ ಪ್ರಾಂಶುಪಾಲ ಕೆ.ಸಿದ್ದೇಗೌಡ ಮಾತನಾಡಿ, ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಫ್ ಎಂದು ಹೇಳಿದ್ದಾರೆ. ಆ ಆನಂದವನ್ನು ಅನುಭವಿಸುತ್ತಾ ಮೈಮರೆಯಬಾರದು. ಉತ್ತಮ ಕಲಿಕೆಯೊಂದಿಗೆ ನಿಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ೨೫ ವರ್ಷದವರೆಗೆ ಕಷ್ಟಪಟ್ಟು ಓದಿದರೆ ಜೀವನ ಪೂರ್ತಿ ಆನಂದ ಮತ್ತು ನೆಮ್ಮದಿಯಿಂದ ಇರಬಹುದು. ಜೀವನದಲ್ಲಿ ಎಲ್ಲರೂ ತೃಪ್ತ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಪಠ್ಯವಿಷಯದ ಜೊತೆಯಲ್ಲಿ ಸಾಮಾನ್ಯ ಜ್ಞಾನವನ್ನೂ ಅವರಲ್ಲಿ ಬೆಳೆಸುವುದು ಅಗತ್ಯ. ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದರಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಮಹತ್ವದ್ದು ಯಾರೂ ಜವಾಬ್ದಾರಿಯನ್ನು ಮರೆಯಬಾರದು ಎಂದರು.ಸಂಪನ್ಮೂಲ ವ್ಯಕ್ತಿ ರವಿನಾರಾಯಣ್ ಮಾತನಾಡಿ, ಪರೀಕ್ಷೆಗೆ ಯಾರೂ ಹೆದರದೆ ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈಗಿನಿಂದಲೇ ಆಸಕ್ತಿಯಿಂದ ಓದಲು ಪ್ರಾರಂಭಿಸಿದರೆ ಉತ್ತಮ ಅಂಕ ಗಳಿಸಬಹುದು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಿಮ್ಮ ಜೀವನಕ್ಕೆ ಮಹತ್ವದ ತಿರುವು ಕೊಡುವ ಘಟ್ಟಗಳು. ಇಲ್ಲಿ ಮೈಮರೆಯದೆ ಜೀವನವನ್ನು ಉಜ್ವಲಗೊಳಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಳಂದ ವಿದ್ಯಾಪೀಠದ ಕಾರ್ಯದರ್ಶಿ ಡಾ.ಆರ್.ರಾಮಕೃಷ್ಣ, ಖಜಾಂಚಿ ಎ.ಸಿ.ಸವಿತಾ ರಾಮಕೃಷ್ಣ ಇತರರಿದ್ದರು.