ಸಾರಾಂಶ
- ಇಂದಾವರ ಗೌಡಾಸ್ ಪ್ರೀಮಿಯರ್ ಲೀಗ್ ಎರಡು ದಿನಗಳ ಟೆನ್ನಿಸ್‌ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ತಾಲೂಕಿನ ಇಂದಾವರ ಗ್ರಾಮದ ಸಮೀಪ ಐಪಿಎಲ್ ಮಾದರಿಯಲ್ಲಿ ಆಯೋಜಿಸಿದ್ದ ಇಂದಾವರ ಗೌಡಾಸ್ ಪ್ರೀಮಿಯರ್ ಲೀಗ್ ಎರಡು ದಿನಗಳ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಕ್ರೀಡಾಪಟುಗಳು ಮೊದಲು ಕ್ರೀಡಾ ಮನೋಭಾವನೆ ಹೊಂದಿರಬೇಕು. ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸರ್ವೆ ಸಾಮಾನ್ಯ. ಹಾಗಾಗಿ ಗೆಲುವನ್ನು ಸಂತೋಷದಿಂದ ಅಭಿನಂದಿಸುವ ಜೊತೆಗೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ದಿನಗಳಲ್ಲಿ ಯಶಸ್ಸುಗಳಿಸಬೇಕು ಎಂದು ಸಲಹೆ ಮಾಡಿದರು.ಶಾಲಾ ಕಾಲೇಜುಗಳಲ್ಲೇ ಕ್ರೀಡಾ ಚಟುವಟಿಕೆ ಅಭ್ಯಾಸಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪಟುವಾಗಿ ಹೊರಹೊಮ್ಮಲು ಸಾಧ್ಯ. ಇಂದಿನ ಯುವ ಪೀಳಿಗೆ ಆಸಕ್ತಿ ಹೊಂದಿರುವ ಕ್ರೀಡೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.ಪ್ರಪಂಚದಲ್ಲಿ ಮನುಷ್ಯನ ಜನ್ಮ ಅತ್ಯಂತ ಪುಣ್ಯವಾದುದು. ಇರುವಷ್ಟು ದಿನಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಳ್ಳುವುದು ಮುಖ್ಯ. ಆ ಸಾಲಿನಲ್ಲಿ ಇಂದಾವರದ ಅನೇಕ ಮಂದಿ ಈ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಚಾರ. ಸಮಾಜದ ಪ್ರತಿ ನಾಗರಿಕರು ಇಂಥ ಕಾರ್ಯಗಳಲ್ಲಿ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಸಮುದಾಯವನ್ನು ಮುಖಂಡರನ್ನು ಪರಸ್ಪರ ಒಗ್ಗಟ್ಟಾಗಿಸುವ ನಿಟ್ಟಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಪ್ರೇರೇಪಿಸುತ್ತಿರುವುದು ಖುಷಿಯ ಸಂಗತಿ. ಇದರಿಂದ ತಿಳಿದು ತಿಳಿಯದಿರುವ ಅನೇಕ ಮಂದಿ ವೈಯಕ್ತಿಕವಾಗಿ ಸಂಪರ್ಕ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಯುವಕರು ಅತಿ ಹೆಚ್ಚು ಮೊಬೈಲ್ ಗೀಳಿಗೆ ದಾಸರಾಗುತ್ತಿರುವುದನ್ನು ತಪ್ಪಿಸಲು ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕುಂದುಕೊರತೆಗಳಿದ್ದಲ್ಲಿ ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದ ಅವರು, ಕ್ರೀಡಾಪಟುಗಳು ಜನಾಂಗದ ಹೆಸರನ್ನು ಬೆಳೆಸುವ ನಿಟ್ಟಿನಲ್ಲಿ ತೊಡಗಿ ಗೌರವ ಕಾಪಾಡಬೇಕು ಎಂದು ಹೇಳಿದರು.ಇಂದಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಐ.ಡಿ.ಚಂದ್ರಶೇಖರ್ ಮಾತನಾಡಿ, ಸತತ ಎರಡು ತಿಂಗಳ ಕಾಲ ಕ್ರಿಕೆಟ್ ಪಂದ್ಯಾವಳಿ ತಯಾರಿ ನಡೆಸಲಾಗಿದ್ದು ಅನೇಕ ದಾನಿಗಳು ಹಾಗೂ ಹಿರಿಯರ ಸಹಕಾರದಿಂದ ಇಂದು ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ. ಕೊನೆ ದಿನವಾದ ಮೇ 12 ರಂದು ಪಂದ್ಯಾವಳಿ ಮುಕ್ತಾಯಗೊಂಡು ಬಹುಮಾನ ವಿತರಿಸ ಲಾಗುವುದು ಎಂದರು.ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ 16 ತಂಡಗಳು ಭಾಗವಹಿಸಿವೆ. ಪ್ರತಿ ಪಂದ್ಯಾವಳಿಗೆ ಕನಿಷ್ಟ 4 ಓವರ್ ಮಾತ್ರಕ್ಕೆ ಸೀಮಿತಗೊಳಿಸಲಾಗಿದೆ. ಪ್ರಥಮ ಬಹುಮಾನ ಒಂದು ಲಕ್ಷ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ 70 ಸಾವಿರ ಟ್ರೋಫಿ, ತೃತೀಯ 50 ಸಾವಿರ ಟ್ರೋಫಿ, ನಾಲ್ಕನೇ ಸ್ಥಾನಕ್ಕೆ 25 ಸಾವಿರ ಟ್ರೋಫಿ ಹಾಗೂ ಭಾಗವಹಿಸಿ ಎಲ್ಲಾ ತಂಡಗಳಿಗೆ ಪ್ರಮಾಣಪತ್ರ ಟ್ರೋಫಿ ವಿತರಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ಹಾಗೂ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಐ.ಎನ್. ಬಸವೇಗೌಡ, ಹಿರಿಯ ಸಲಹೆಗಾರ ಪ್ರಮೋದ್‌ಚಂದ್ರ, ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ, ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಐ.ಎಸ್.ಉಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಕ್ರಾಂತ್, ಆಯೋಜಕ ಐ.ಸಿ. ಸಂತೋಷ್, ಪಲ್ಲವಿ ರವಿ, ಐ.ಎಂ.ಸುರೇಶ್, ಐ.ಕೆ. ನವೀನ್‌ಗೌಡ, ಐ.ಸಿ.ಶ್ರೀನಾಥ್, ಐ.ಎನ್.ರೇವಣ್ಣಗೌಡ, ಮಂಜುನಾಥ್, ಚೇತನ, ಐ.ಎಂ.ನಾಗೇಶ್‌ಗೌಡ ಉಪಸ್ಥಿತರಿದ್ದರು. 11 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲಿ ಗೌಡಾಸ್ ಪ್ರೀಮಿಯರ್ ಲೀಗ್ ಎರಡು ದಿನಗಳ ಟೆನ್ನಿಸ್‌ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಶನಿವಾರ ಬ್ಯಾಟಿಂಗ್ ಮಾಡುವ ಮೂಲಕ ಶಾಸಕ ಎಚ್.ಡಿ. ತಮ್ಮಯ್ಯ ಚಾಲನೆ ನೀಡಿದರು.