ಕ್ರೀಡೆಗಳು ಜೀವನಕ್ಕೆ ಸಿದ್ಧಾಂತವಿದ್ದಂತೆ, ದಿನಚರಿಯನ್ನಾಗಿಸಿಕೊಳ್ಳಿ: ರಾಜ್ಯಪಾಲ ಗೆಹ್ಲೋಟ್ ಕರೆ

| Published : Jan 24 2025, 12:46 AM IST

ಕ್ರೀಡೆಗಳು ಜೀವನಕ್ಕೆ ಸಿದ್ಧಾಂತವಿದ್ದಂತೆ, ದಿನಚರಿಯನ್ನಾಗಿಸಿಕೊಳ್ಳಿ: ರಾಜ್ಯಪಾಲ ಗೆಹ್ಲೋಟ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನತೆ ಆಟೋಟಗಳನ್ನು ಜೀವನದ ದಿನಚರಿಯನ್ನಾಗಿಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಹೇಳಿದರು. ಕರ್ನಾಟಕ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಮತ್ತು ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಥಿತಿ ಉತ್ಸಾಹಜನಕವಾಗಬೇಕಾದರೆ, ಯುವಜನತೆ ಆಟೋಟಗಳನ್ನು ಜೀವನದ ದಿನಚರಿಯನ್ನಾಗಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.

ಅವರು ಗುರುವಾರ, ಅಜ್ಜರಕಾಡಿನ ಮಹತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ - 2025 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಒಲಿಂಪಿಕ್ಸ್ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಸ್ಥಾನಮಾನ ಉತ್ಸಾಹಜನಕವಾಗಿಲ್ಲ ಎಂದು ಟೀಕೆ ಮಾಡಲಾಗುತ್ತದೆ, ಆದರೆ ಎಷ್ಟು ಮಂದಿ ಹೆತ್ತವರು ತಮ್ಮ ಮಕ್ಕಳು ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡುತ್ತಾರೆ ಎಂಬುದನ್ನು ಆಲೋಚಿಸಬೇಕು ಎಂದವರು ಹೇಳಿದರು.

ಆಟೋಟ ಜೀವನದ ಸಿದ್ಧಾಂತ

ಕ್ರೀಡೆಗಳನ್ನು ಜೀವನಕ್ಕೊಂದು ಸಿದ್ಧಾಂತವಿದ್ದಂತೆ, ಕ್ರೀಡೆಗಳು ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತವೆ. ಮನೋರಂಜನೆಯ ಜೊತೆಗೆ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಸಾಮಾಜಿಕ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಅಲ್ಲದೇ ಆಟೋಟಗಳು ಶಿಸ್ತು, ಸಂಯಮ, ಸಂಘರ್ಷ ಮತ್ತು ಸಕರಾತ್ಮಕ ದೃಷ್ಠಿಕೋನವನ್ನು ನೀಡುತ್ತವೆ. ಒಬ್ಬಂಟಿತನ ಮತ್ತು ಚಿಂತೆಯನ್ನು ದೂರ ಮಾಡುತ್ತವೆ. ಏಕಾಗ್ರತೆ, ಸಹಕಾರ ಹಾಗೂ ತಂಡವಾಗಿ ಕೆಲಸ ಮಾಡುವ, ಸಕಾಲಿಕ ನಿರ್ಣಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸುತ್ತವೆ ಎಂದವರು ವಿಶ್ಲೇಷಿಸಿದರು.

ದಿವ್ಯಾಂಗರಿಗೆ ಕ್ರೀಡಾ ಕೇಂದ್ರ

ಇತ್ತೀಚಿನ ದಿನಗಳಲ್ಲಿ ದೇಶದ ಕ್ರೀಡಾಪಟುಗಳು ಏಷ್ಯಾನ್, ಓಲಿಂಪಿಕ್ಸ್ ಮತ್ತು ಪ್ಯಾರಾಂಲಪಿಕ್ಸ್‌ಗಳಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ. ದಿವ್ಯಾಂಗ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ದೇಶದ 5 ಕಡೆಗಳಲ್ಲಿ ದಿವ್ಯಾಂಗ ಕ್ರೀಡಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಕರ್ನಾಟಕದಲ್ಲಿಯೂ ಈ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

.

ಕರಾವಳಿ ಜಿಲ್ಲೆಗಳಲ್ಲಿ ಪ್ರಪ್ರಥಮ ಬಾರಿಗೆ ಇಷ್ಟು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದು, ಇದು ಕರಾವಳಿಯ ಕ್ರೀಡಾಪಟುಗಳಿಗೆ ಹೊಸ ಕ್ರೀಡಾಸ್ಪೂರ್ತಿಯನ್ನು ತುಂಬಲಿದೆ ಎಂದವರು ಭರವಸೆ ವ್ಯಕ್ತಪಡಿಸಿದರು.

ಜಾತಿಧರ್ಮ ಇಲ್ಲದ ಕ್ಷೇತ್ರ ಕ್ರೀಡೆ

ಮುಖ್ಯ ಅತಿಥಿ, ಗೃಹಸಚಿವ ಜಿ.ಪರಮೇಶ್ವರ್ ಮಾತನಾಡಿ, ಜಾತಿ, ಧರ್ಮ ಇಲ್ಲದ ಒಂದೇ ಒಂದು ಕ್ಷೇತ್ರ ಅದು ಕ್ರೀಡೆ. ಈ ಕ್ಷೇತ್ರದಲ್ಲಿ ಯುವಪೀಳಿಗೆ ಹೆಚ್ಚು ತೊಡಗಿಸಿಕೊಂಡರೆ ಜಾತಿಗಳ ಭೇದಭಾವಗಳನ್ನು ತೊಲಗಿಸಬಹುದು ಎಂದರು.

ಇತ್ತೀಚೆಗೆ ಯುವಕರು ಹೆಚ್ಚು ವ್ಯಸನಿಗಳಾಗುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳನ್ನು ವ್ಯಸನಿಗಳನ್ನಾಗಿಸಲಾಗುತ್ತಿದೆ. ಇದರ ವಿರುದ್ಧ ಪೋಲಿಸ್ ಇಲಾಖೆ ದೊಡ್ಡ ಮಟ್ಟದಲ್ಲಿ ಸಮರ ಸಾರಿದೆ. ಇದೆಲ್ಲದರಿಂದ ವಿದ್ಯಾರ್ಥಿಗಳು ದೂರವಿರಲು ಹೆತ್ತವರು ತಮ್ಮ ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿ ಎಂದವರು ಸಲಹೆ ಮಾಡಿದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಮಂಜುನಾಥ್ ಭಂಡಾರಿ, ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಫೀಬಾ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಗೋವಿಂದ್ ರಾಜ್, ಮಾಜಿ ಸಚಿವರಾದ ಅಭಯ್ ಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂಸ್ಟಾನ್ಲಿ ಅಲ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಹೆಚ್.ಎಸ್.ಬಲ್ಲಾಳ್, ಸಹಕುಲಪತಿ ಲೆ.ಜ.ಡಾ.ಎಮ್.ಡಿ ವೆಂಕಟೇಶ್, ಪಶ್ಚಿಮವಲಯ ಐಜಿಪಿ ಅಮೃತ್ ಸಿಂಗ್, ಜಿಲ್ಲಾ ಎಸ್ಪಿ ಡಾ.ಅರುಣ್, ಕರಾವಳಿ ಕಾವಲುಪಡೆ ಎಸ್ಪಿ ಮಿಥುನ್, ಎಎನ್ಎಫ್ ಎಸ್ಪಿ ಜಿತೇಂದ್ರ ದಯಾಮ, ಜಿ.ಪಂ ಸಿಇಓ ಪ್ರತೀಕ್ ಬಾಯಲ್, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ವಾಗತಿಸಿದರು.