ಕ್ರೀಡೆಯಿಂದ ಪರಸ್ಪರ ಬಾಂಧವ್ಯ ಸಾಧ್ಯ: ವಿ.ಪಿ.ಶಶಿಧರ್

| Published : Feb 25 2025, 12:49 AM IST

ಸಾರಾಂಶ

ನಾಕೂರು ಶಿರಂಗಾಲದ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಬೆಳ್ಳಿ ಹಬ್ಬದ ಅಂಗವಾಗಿ ಕಾನ್‌ಬೈಲ್ ಶಾಲಾ ಆವರಣದಲ್ಲಿ ಆಯೋಜಿಸಲಾದ ಕ್ರೀಡೋತ್ಸವದ ಸಮಾರೋಪ ಸಮಾರಂಭ ನಡೆಯಿತು.

ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಬೆಳ್ಳಿ ಹಬ್ಬ: ಕ್ರೀಡಾಕೂಟ ಆಯೋಜನೆ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಲೆ ಮತ್ತು ಕ್ರೀಡೆಗೆ ಜಾತಿ, ಜನಾಂಗ, ಪಕ್ಷ, ರಾಜಕೀಯ ಎಲ್ಲವನ್ನು ಮೀರಿದ ಪರಸ್ಪರ ಬಾಂಧವ್ಯ ಮತ್ತು ಮನುಷ್ಯ ಪ್ರೀತಿಯನ್ನು ಸಂಬಂಧಗಳನ್ನು ಗಟ್ಟಿಗೊಳಿಸುವ ಅದ್ಭುತ ಶಕ್ತಿಯಿದೆ ಎಂದು ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.ನಾಕೂರು ಶಿರಂಗಾಲದ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಬೆಳ್ಳಿ ಹಬ್ಬದ ಅಂಗವಾಗಿ ಕಾನ್‌ಬೈಲ್ ಶಾಲಾ ಆವರಣದಲ್ಲಿ ಆಯೋಜಿಸಲಾದ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ಯೂತ್‌ಕ್ಲಬ್ ಕ್ರೀಡಾಕೂಟದ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದು, ಎಲ್ಲರನ್ನೂ ಒಳಗೊಳ್ಳುವ ಮನುಷ್ಯ ಪ್ರೀತಿಯ ಸಮಾಜವನ್ನು ನಿರ್ಮಿಸುತ್ತಿರುವ ನಾಯಕರನ್ನು ರೂಪಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾಕೂರು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ, ಯೂತ್ ಕ್ಲಬ್ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಬೆಳ್ಳಿ ಹಬ್ಬದ ತಯಾರಿಗೆ ಕ್ಲಬ್‌ ಪದಾಧಿಕಾರಿಗಳು ಮತ್ತು ಗ್ರಾಮಸ್ಥರ ಕೊಡುಗೆ ಅಪಾರವಾದುದು. ವಿದ್ಯೆಯಿಂದ ಮಾತ್ರವಲ್ಲದೆ ಕ್ರೀಡೆಯಿಂದ ಕೂಡ ಉತ್ತಮ ಉದ್ಯೋಗ, ಉನ್ನತ ಪದವಿಗಳನ್ನು ಪಡೆಯಬಹುದು. ಕ್ರೀಡೆ ನಮ್ಮನ್ನು ಜೀವನ ಪರ್ಯಂತ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದರು.ಮುಖ್ಯ ಅತಿಥಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಜಿ. ಮಾತನಾಡಿ, ಒಂದು ಗ್ರಾಮದಲ್ಲಿ ಯಾವುದೇ ಸಭೆ ಸಮಾರಂಭ ನಡೆದಾಗ ಅದು ವೈಯಕ್ತಿಕ ಇಲ್ಲವೇ ಒಂದು ಸಮುದಾಯಕ್ಕೆ ಸಿಮೀತವಾಗಿರುತ್ತದೆ. ಆದರೆ ಕ್ರೀಡಾಕೂಟ ನಮ್ಮ ಊರಿನ ಮತ್ತು ಮನೆಯ ಕಾರ್ಯಕ್ರಮ ಎಂಬಂತೆ ಬಿಂಬಿಸಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ತಂದಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಾಗದೆ ಸ್ಪರ್ಧೆ ಮುಖ್ಯವಾಗಿದ್ದು, ಹೆಚ್ಚು ಸುಸಂಸ್ಕೃತರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೇವೆ ಎಂಬುದು ಮುಖ್ಯವಾಗಬೇಕೆಂದು ಕಿವಿಮಾತು ಹೇಳಿದರು.ಸಮಾರೋಪ ಸಮಾರಂಭವನ್ನು ನಾಕೂರು ಮೂಲೆಮನೆ ಕೋಮಲ್ ಸಾಬ್ಲೆ ಉದ್ಘಾಟಿಸಿದರು.ವೇದಿಕೆಯಲ್ಲಿ ಅಕ್ಷಯ್ ದಶರಥ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ತಾಲೂಕು ಬಿಜೆಪಿ ಅಧ್ಯಕ್ಷ ಗೌತಮ್, ಗ್ರಾ.ಪಂ. ಉಪಾಧ್ಯಕ್ಷ ಬಿ.ಇ.ಸತೀಶ್, ಸದಸ್ಯರಾದ ಅರುಣಾ ಕುಮಾರಿ ಪ್ರಕಾಶ್, ರಾಧಮಣಿ, ಸೀತೆ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ವಾಹನ ಚಾಲಕರ ಸಂಘ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಹಾರಂಗಿ ಕಾವೇರಿ ಮಿನುಗಾರರ ಸಂಘ ಅಧ್ಯಕ್ಷ ಮಹಮ್ಮದ್, ಕಾಫಿ ಬೆಳೆಗಾರರಾದ ಕೆ.ಎಂ.ನಂಜಪ್ಪ, ಅಡಿಕೇರಿ ಧರ್ಮಪ್ಪ, ಪಿ.ಎಂ.ಈರಪ್ಪ, ಎ.ಆರ್.ಪಾಪ್ಪಣ್ಣ, ಆದಂ, ಕಾರ್ಮಿಕರ ಸಂಘ ಅಧ್ಯಕ್ಷ ಕುಮಾರ, ಬಿ.ಜಿ.ನರೇಂದ್ರ, ಪಿ.ಜಿ.ಹೆಗ್ಡೆ, ಫ್ರೆಂಡ್ಸ್ ಯೂತ್ ಅಧ್ಯಕ್ಷ ಶಂಕರನಾರಾಯಣ, ಪಿ.ಟಿ.ಪೌಲೊಸ್, ಮಾಜಿ ಅಧ್ಯಕ್ಷ ಪಿ.ಎಸ್.ಅಜಿತ್, ಗೌರವಾಧ್ಯಕ್ಷ ವಸಂತ್ ಬಿ.ಎ., ಖಜಾಂಚಿ ವಿನೋದ್ ಕೆ.ಎಸ್., ವಿನೇಶ್ ಕೆ.ಎಂ., ಚಂದ್ರಶೇಖರ್ ಟಿ., ಸಂಘಟನಾ ಕಾರ್ಯದರ್ಶಿ ಸಂತೋಷ್ ಬಿ.ವಿ. ಸೇರಿದಂತೆ ಮತ್ತಿತರರು ಇದ್ದರು.ಬೆಳ್ಳಿ ಮಹೋತ್ಸವದ ಅಂಗವಾಗಿ ಸ್ಥಳೀಯ ಪುರುಷರಿಗೆ ಕಬಡ್ಡಿ ಪಂದ್ಯಾವಳಿ, ಮಕ್ಕಳ ಕಬಡ್ಡಿ (ಪ್ರಾಥಮಿಕ ಶಾಲಾ ವಿಭಾಗ ಮತ್ತು ಪ್ರೌಢಶಾಲಾ ವಿಭಾಗ) ಪಂದ್ಯಾವಳಿ, ಸ್ಥಳೀಯ ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಹಾಗೂ ಮಕ್ಕಳಿಗೆ ಕಾಳು ಹೆಕ್ಕುವುದು (೫ ವರ್ಷಗೊಳಪಟ್ಟು), ಕಪ್ಪೆ ಜಿಗಿತ, ಗೋಣಿಚೀಲ ಜಿಗಿತ (೧ರಿಂದ ೭ನೇ ತರಗತಿ ಮಕ್ಕಳಿಗೆ ಮಾತ್ರ) ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸಲಾಯಿತು.