ಆರೋಗ್ಯ ದೃಷ್ಟಿಯಿಂದ ಕ್ರೀಡಾಕೂಟ ಸಹಕಾರಿ: ಇಮಾಮ್‌ ನಿಯಾಜಿ

| Published : Jul 16 2024, 12:37 AM IST

ಆರೋಗ್ಯ ದೃಷ್ಟಿಯಿಂದ ಕ್ರೀಡಾಕೂಟ ಸಹಕಾರಿ: ಇಮಾಮ್‌ ನಿಯಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆ ನಗರದ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಇಂದಿನ ಒತ್ತಡದ ಬದುಕಿನಲ್ಲಿ ಕ್ರೀಡಾಕೂಟ ಕೂಡ ಬಹುಮುಖ್ಯವಾಗಿದೆ. ಸರ್ಕಾರಿ ನೌಕರರು ಎಲ್ಲರೂ ಸೇರಿ ಕ್ರೀಡಾಕೂಟ ನಡೆಸುವುದರಿಂದ ಆರೋಗ್ಯ ದೃಷ್ಟಿಯಿಂದಲೂ ಸಹಕಾರಿಯಾಗಿದೆ ಎಂದು ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್‌.ಎನ್‌.ಎಫ್‌. ಮಹಮ್ಮದ್‌ ಇಮಾಮ್‌ ನಿಯಾಜಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ನಗರದ ಪುನೀತ್‌ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೌಕರರು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮನೋಬಲ ಹಾಗೂ ಆರೋಗ್ಯ ವೃದ್ಧಿಗೂ ಅನುಕೂಲ ಆಗಲಿದೆ ಎಂದರು.

ಡಿಡಿಪಿಐ ಎ. ಹನುಮಕ್ಕ ಮಾತನಾಡಿ, ಸರ್ಕಾರಿ ನೌಕರರ ಕ್ರೀಡಾಕೂಟ ಎಲ್ಲರಿಗೂ ಮಾದರಿಯಾಗಬೇಕು. ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಸೋಲು-ಗೆಲುವು ಸಮಾನವಾಗಿ ಸ್ವೀಕಾರ ಮಾಡಬೇಕು. ಈ ಕ್ರೀಡಾಕೂಟದಲ್ಲಿ ಎಲ್ಲರೂ ಶಿಸ್ತು ಮೈಗೂಡಿಸಿಕೊಳ್ಳಬೇಕು. ಮೌಲ್ಯಯುತ ತೀರ್ಪುಗಾರರು ಕೂಟ ನಡೆಸುತ್ತಿದ್ದಾರೆ. ಹಾಗಾಗಿ, ತಿರ್ಫುಗಾರರ ತೀರ್ಪು ಗೌರವಿಸಬೇಕು. ಕ್ರೀಡಾಕೂಟದಲ್ಲಿ ಎಲ್ಲರೂ ಉತ್ಸಾಹಿತರಾಗಿ ಭಾಗವಹಿಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಎ. ಲತಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡಾಜ್ಯೋತಿ ಬೆಳಗಿದರು. ಬಳಿಕ ಅವರು ಕ್ರೀಡಾಕೂಟದ ಧ್ವಜವಂದನೆ ಸ್ವೀಕರಿಸಿದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಮಲ್ಲಿಕಾರ್ಜುನಗೌಡ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗ್ರೇಸಿ ಅವರು ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಚಿತ್ತವಾಡ್ಗಿ ಸಿಪಿಐ ಅಶ್ವತ್ಥ ನಾರಾಯಣ, ತಹಸೀಲ್ದಾರ್‌ ವಿಶ್ವಜಿತ್‌ ಮೆಹತಾ, ನಿವೃತ್ತ ದೈಹಿಕ ಪರಿವೀಕ್ಷಕ ಬಸವರಾಜ ಜತ್ತಿ, ಸಂಘದ ಪದಾಧಿಕಾರಿಗಳಾದ ಎಚ್‌. ಜೀವಣ್ಣ, ರಾಘವೇಂದ್ರ ಎಸ್‌. ಹೆಗ್ಡಿಯಾಳ್‌, ಬಿ.ಎಂ. ಜಯರಾಜ್‌, ಬಿ.ಸಿ. ಸುರೇಶ್, ಎಸ್‌. ಬಸವರಾಜ್‌, ಅಶ್ವತ್ಥ ಎಂಪಿಎಂ, ಪಿ. ಶಿವರಾಜ್, ಕೆ. ಜಗದೀಶ್, ಎಂಬಿಎಂ ಮಂಜುನಾಥ, ಮನೋಹರ್‌ ಎನ್‌.ಜಿ., ಕೆ. ಮಾರ್ಗದಪ್ಪ ಮತ್ತಿತರರಿದ್ದರು. ಜಿಲ್ಲಾ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ್ವರ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ನಿರ್ವಹಿಸಿದರು.

ಜಿಲ್ಲಾಧಿಕಾರಿ ಭೇಟಿ:

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಜಿಪಂ ಸಿಇಒ ನೋಂಗ್ಜಾಯ್‌ ಮೊಹಮ್ಮದ್‌ ಅಲಿ ಅಕ್ರಂ ಶಾ ಅವರು ಕ್ರೀಡಾಂಗಣಕ್ಕೆ ಭೇಟಿ, ಟೆನಿಸ್‌ ಆಟಕ್ಕೆ ಚಾಲನೆ ನೀಡಿದರು.