ಧಾರವಾಡ:
ಧಾರವಾಡದಲ್ಲಿ ಕ್ರೀಡಾ ಸಂಕೀರ್ಣವನ್ನು ಬಹಳ ಪ್ರಯತ್ನದೊಂದಿಗೆ ನಿರ್ಮಿಸಲಾಗಿದೆ. ಕ್ರೀಡಾ ಸಂಕೀರ್ಣದಲ್ಲಿ ಕೆಲವೊಂದು ನ್ಯೂನತೆ ಸರಿಪಡಿಸಿ, ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಕ್ರೀಡಾ ಸಂಕೀರ್ಣವನ್ನು ಕ್ರೀಡಾಪಟುಗಳಿಗೆ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.ಶುಕ್ರವಾರ ನೂತನ ಕ್ರೀಡಾ ಸಂಕೀರ್ಣದಲ್ಲಿ ರಾಜ್ಯ ಅಮೆಚೂರ ಮಲ್ಲಕಂಬ ಸಂಸ್ಥೆಯು ಆಯೋಜಿಸಿದ್ದ ಮಲ್ಲಕಂಬ ಕ್ರೀಡೋತ್ಸವ ಉದ್ಘಾಟಿಸಿದ ಅವರು, ಈ ಕ್ರೀಡೆಯಲ್ಲಿ ಮಾನಸಿಕ ಏಕಾಗ್ರತೆ ಬಹಳ ಮುಖ್ಯವಾಗಿದೆ. ಕ್ರೀಡೋತ್ಸವದಲ್ಲಿ ರಾಜ್ಯದ 14 ಜಿಲ್ಲೆಯ ಒಟ್ಟು 252 ಕ್ರೀಡಾಪಟುಗಳು ಭಾಗವಹಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.
ಬಾಜಿರಾವ್ ಪೇಶ್ವೆಯವರ ಗುರುಗಳಾದ ಬಾಳಭಟ್ಟ ಈ ಕಲೆಯನ್ನು ಪುನರುಜ್ಜೀವನಗೊಳಿಸಿ ಸೈನಿಕರಿಗೆ ಮನೋಬಲ ತುಂಬಿಸಲು, ಹೋರಾಟ ಹಾಗೂ ಸೈನಿಕರ ಏಕಾಗ್ರತೆ ಹೆಚ್ಚಿಸಲು ಈ ಕ್ರೀಡೆಯನ್ನು ನಮ್ಮ ಭಾಗದಲ್ಲಿ ಹೆಚ್ಚು ಪ್ರಚಲಿತಪಡಿಸಿದರು ಎಂದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಮಲ್ಲಕಂಬ ಕ್ರೀಡೆಯನ್ನು ಖೇಲೋ ಇಂಡಿಯಾ ಕ್ರೀಡೆಯಲ್ಲಿ ಸೇರ್ಪಡೆಗೊಳಿಸಿದರು. ಇದನ್ನು ಆದಿವಾಸಿಗಳು (ಬುಡಕಟ್ಟು ಜನಾಂಗದವರಿಗೂ) ಸಹ ಮಲ್ಲಕಂಬ ಕ್ರೀಡೆ ಆಡಲು ಅನುಕೂಲ ಮಾಡಿಕೊಟ್ಟರು ಎಂದರು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಧಾರವಾಡದಲ್ಲಿ ರಾಜ್ಯಮಟ್ಟದ ಮಲ್ಲಕಂಬ ಕ್ರೀಡೋತ್ಸವ ಮೊದಲ ಬಾರಿಗೆ ನಡೆಯುತ್ತಿದೆ. ಮಲ್ಲಕಂಬ ಮತ್ತು ರೋಪ್ ಕ್ರೀಡೆಗಳು ಬಹಳ ಪ್ರಾಚೀನವಾಗಿದ್ದು, ಈ ವಿದ್ಯೆಯನ್ನು 1965ರಲ್ಲಿ ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಎನ್.ಎಚ್. ಪಾಟೀಲ ಅವರೊಂದಿಗೆ ಪ್ರಾರಂಭಿಸಲಾಯಿತು. ಈ ಮಲ್ಲಕಂಬ ಕ್ರೀಡೋತ್ಸವವನ್ನು ಉಳಿಸಿ-ಬೆಳೆಸಲು ಲಕ್ಷೇಶ್ವರದಲ್ಲಿ ಕಾರ್ಯಕ್ರಮ ಮಾಡಿ ಆಲ್ ಇಂಡಿಯಾ ಅಧ್ಯಕ್ಷ ಗೋಪೆ ಅವರ ಸಮ್ಮುಖದಲ್ಲಿ ಕ್ರೀಡೆಯನ್ನು ನಡೆಸಲಾಯಿತು ಎಂದು ಹೇಳಿದರು.
ಪಾಲಕರು ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಿ, ಹೆಚ್ಚಿನ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆ ಮಾಡಬಹುದು. ಜತೆಗೆ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯಿಂದ ಜೀವಿಸಬಹುದು ಎಂದರು.
ರಾಜ್ಯ ಅಮೆಚೂರ್ ಮಲ್ಲಕಂಬ ಸಂಸ್ಥೆ ಅಧ್ಯಕ್ಷ ಪ್ರಕಾಶ ಮ್ಯಾಗೇರಿ, ಕಾರ್ಯದರ್ಶಿ ಎಸ್.ಎಫ್. ಕೊಡ್ಲಿ, ಪಾಲಿಕೆ ಸದಸ್ಯರಾದ ಸುರೇಶ ಬೇದರೆ ಹಾಗೂ ವಿಷ್ಣು ಕೇರಳೆ, ಸಿ.ಕೆ. ಚನ್ನಾಳ ಇದ್ದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಸ್ವಾಗತಿಸಿದರು. ಶಂಭಯ್ಯ ಹಿರೇಮಠ ನಿರೂಪಿಸಿದರು. ಬಾಳಬಳಗ ವಿದ್ಯಾರ್ಥಿಗಳು ಪ್ರಾರ್ಥಿಸಿದರು.