ಸಾರಾಂಶ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ಮಾ 12ರಿಂದ 9 ದಿನಗಳ ಪರ್ಯಂತ ನಡೆಯಲಿರುವ ಇಲ್ಲಿನ ಶ್ರೀ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ ನಡೆದಿದ್ದು ದೇವಸ್ಥಾನ ಮತ್ತು ಪಟ್ಟಣದ ಆಜಾದ್ ರಸ್ತೆ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ.ಸಾಂಪ್ರದಾಯಿಕವಾಗಿ 2 ವರ್ಷಕ್ಕೊಮ್ಮೆ ನಡೆಯುವ ಧಾರ್ಮಿಕ ಹಬ್ಬಕ್ಕೆ ಮಾ.12ರಂದು ಮಾರಿ ಸಾರುವುದರೊಂದಿಗೆ ಚಾಲನೆ ದೊರೆಯಲಿದೆ. ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ ಈ ಬಾರಿ ವಿಶೇಷವಾಗಿ ಮಾ.14 ರಿಂದ 17ರವರೆಗೆ ಸ್ಥಳೀಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ಬಾಳೇಬೈಲು ಮೈದಾನದಲ್ಲಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯನ್ನು ಕೂಡಾ ಆಯೋಜಿಸಲಾಗಿದೆ.
ಮಾ.13ರಿಂದ ಪ್ರತಿದಿನ ದೇವಸ್ಥಾನದಲ್ಲಿ ವಿಶೇಷವಾಗಿ ಪಾರಾಯಣ, ರಂಗಪೂಜೆ ಮಾತ್ರವಲ್ಲದೇ ಮಾ.16ರಂದು ಚಂಡಿಕಾ ಹೋಮ ಮುಂತಾದ ವಿಧಿವಿಧಾನಗಳು ನಡೆಯಲಿದೆ. ಮಾ.19ರಂದು ಸಂಜೆ ಎಣ್ಣೆ ಭಂಡಾರ ಪೂಜೆ ಹಾಗೂ 20 ರಂದು ಮಧ್ಯಾಹ್ನ ರಾಜಬೀದಿ ಉತ್ಸವದೊಂದಿಗೆ ತುಂಗಾನದಿಯಲ್ಲಿ ಗೊಂಬೆ ವಿಸರ್ಜನೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳು: ಮಾ.13ರಿಂದ ಪ್ರತಿದಿನ ಸಂಜೆ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕ್ರಮವಾಗಿ ಡಾನ್ಸ್ ಪ್ಯಾಲೇಸ್ ವತಿಯಿಂದ ನೃತ್ಯ ಸಂಭ್ರಮ, ಕಲ್ಲಡ್ಕ ವಿಠಲ ನಾಯಕ್ ತಂಡದವರ ಗೀತಾ ಸಾಹಿತ್ಯ ಸಂಭ್ರಮ, ಪ್ರೊ.ಕೃಷ್ಣೇಗೌಡರಿಂದ ನಗೆ ನೈವೇದ್ಯ, ಮಂಗಳೂರಿನ ಸುಪ್ರೀತ್ ಸಫಲಿಗ ಬಳಗದ ಸಂಗೀತ ಸೌರಭ, ಸವಿತಾ ಗಣೇಶ್ ಪ್ರಸಾದ್ ತಂಡದ ಸವಿತಕ್ಕನ ಅಳ್ಳಿ ಬ್ಯಾಂಡ್ ಸಂಗೀತ ಸೌರಭ, ಬೆಂಗಳೂರಿನಲ್ಲಿ ನೆಲೆಸಿರುವ ಸ್ಥಳೀಯ ಕಲಾವಿದರ ನೈತ್ಯ ವೈಭವ ಮತ್ತು ಕೊನೆಯದಾಗಿ ಮಾ 18 ರಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಯಕ್ಷಗಾನ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
- - - -11ಟಿಟಿಎಚ್02: ಶ್ರೀ ಮಾರಿಕಾಂಬೆ