ಸಾರಾಂಶ
ಕುಮಟಾ: ಕ್ರೀಡೆ ಸ್ನೇಹಪರತೆ ಮತ್ತು ತಂಡದ ಮನೋಭಾವ ಬೆಳೆಸುವುದಲ್ಲದೆ ದೈಹಿಕ ದೃಢತೆ ಮತ್ತು ಮಾನಸಿಕ ಆರೋಗ್ಯ ಬೆಳೆಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ರೂಪಿಸಿ ಬಲಶಾಲಿ ಮತ್ತು ಕ್ರಿಯಾಶೀಲವಾಗಿಸುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಮಣಕಿ ಮೈದಾನದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಧಾರೇಶ್ವರ ಸರ್ಕಾರಿ ಶಾಲೆಯ ಆಶ್ರಯದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ೧೪ ವರ್ಷ ವಯೋಮಿತಿಯ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿ ದೇವಗಿರಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಮಾತನಾಡಿ, ಇಲಾಖೆಯಿಂದ ಸಮರ್ಪಕ ಅನುದಾನದ ಅಲಭ್ಯತೆ ಕ್ರೀಡಾಕೂಟಗಳ ಆಯೋಜನೆಗೆ ದೊಡ್ಡ ತೊಡಕಾಗಿದೆ. ಧಾರೇಶ್ವರ ಶಾಲೆಯ ಎಸ್‌ಡಿಎಂಸಿ ಹಾಗೂ ಶಿಕ್ಷಕರು ಊರಿನ ತುಂಬಾ ಮನೆಮನೆಗೆ ಕಾಲ್ನಡಿಗೆಯಲ್ಲಿ ತೆರಳಿ ಕ್ರೀಡಾಭಿಮಾನಿಗಳ ಸಹಾಯ ಪಡೆದು ತಮ್ಮ ಶಾಲೆಯ ಮಕ್ಕಳ ಕ್ರೀಡಾಬೆಳವಣಿಗೆಗೆ ಪ್ರೋತ್ಸಾಹ ನೀಡಿದ ಪರಿ ನಿಜಕ್ಕೂ ವ್ಯವಸ್ಥೆಯ ಕಣ್ಣು ತೆರೆಸುವಂಥದ್ದು. ಈ ಪರಿಸ್ಥಿತಿ ಬದಲಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಗಿರಿ ಗ್ರಾಪಂ ಅಧ್ಯಕ್ಷೆ ವೀಣಾ ದುರ್ಗೇಕರ ಮಾತನಾಡಿ, ಕ್ರೀಡೆ ದೇಹವನ್ನು ಪೋಷಿಸುವುದಲ್ಲದೆ ಮನಸ್ಸನ್ನು ಆರೋಗ್ಯವಾಗಿಡುತ್ತದೆ. ಮಾನವ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಇದು ಅತ್ಯಗತ್ಯ. ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವ, ತಂಡಗಳ ನಡುವಿನ ಸೌಹಾರ್ದತೆ ಮತ್ತು ಸಹ ವಿದ್ಯಾರ್ಥಿಗಳ ಬೆಂಬಲ ಅತ್ಯಂತ ಮಹತ್ವದ್ದಾಗಿದೆ ಎಂದರು.ವೇದಿಕೆಯಲ್ಲಿ ಬಿಇಒ ಉದಯ ನಾಯ್ಕ, ದೇವಗಿರಿ ಪಂಚಾಯಿತಿ ಅಧ್ಯಕ್ಷ ವೀಣಾ ದುರ್ಗೆಕರ, ಉಪಾಧ್ಯಕ್ಷ ಎಸ್.ಟಿ. ನಾಯ್ಕ, ಸದಸ್ಯರಾದ ಪಾಂಡುರಂಗ ಪಟಗಾರ, ನಾಗೇಶ ನಾಯ್ಕ, ದಿನಕರ ಭಂಡಾರಿ, ಎಸ್‌ಡಿಎಂಸಿ ಅಧ್ಯಕ್ಷ ದೇವು ಮುಕ್ರಿ, ಉಪಾಧ್ಯಕ್ಷೆ ಮಹಾಲಕ್ಷ್ಮೀ ನಾಯ್ಕ, ಚಂದ್ರ ನಾಯ್ಕ, ಬಿಆರ್‌ಸಿ ವಿಜಯಲಕ್ಷ್ಮಿ, ಸಿಆರ್‌ಪಿ ನಾಗರಾಜ ಪಟಗಾರ, ಎನ್.ಆರ್.ನಾಯ್ಕ, ಕಿರಣ ನಾಯ್ಕ, ಯೋಗೇಶ ಪಟಗಾರ ಇನ್ನಿತರರು ಧಾರೇಶ್ವರ ಯುವಕ ಸಂಘದವರು, ಪಾಲಕರು ಇದ್ದರು.