ಮನಸ್ಸು, ದೇಹಕ್ಕೆ ಚೈತನ್ಯ ನೀಡುವುದು ಕ್ರೀಡೆ

| Published : Mar 01 2024, 02:21 AM IST

ಸಾರಾಂಶ

ವಿಜಯಪುರ: ದೈನಂದಿನ ಕೆಲಸದ ಒತ್ತಡದ ಮಧ್ಯೆಯೂ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ಒದಗಿಸಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿದ್ದು, ಚಟುವಟಿಕೆಯಿಂದಿರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೈನಂದಿನ ಕೆಲಸದ ಒತ್ತಡದ ಮಧ್ಯೆಯೂ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ಒದಗಿಸಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿದ್ದು, ಚಟುವಟಿಕೆಯಿಂದಿರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕಗಳ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಪ್ರತಿದಿನ ಚೈತನ್ಯದಿಂದರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ದೈನಂದಿನ ಬದುಕಿನ ಜೀವನಶೈಲಿಯಾಗಿಸಿ ಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲವು ಸಾಮಾನ್ಯವಾಗಿದ್ದು, ಭಾಗವಹಿಸುವಿಕೆ ಅತಿಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಎಲ್ಲ ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೂ ಜಿಲ್ಲೆಯ ಸ್ಪರ್ಧಾಳುಗಳು ಭಾಗವಹಿಸಲಿ ಎಂದು ಹಾರೈಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ವ್ಯಕ್ತಿತ್ವವನ್ನು ಸದೃಢಗೊಳಿಸಲು ಪೂರಕವಾಗಿ ಸಹಕಾರಿಯಾಗಿವೆ. ದೇಹ ಮತ್ತು ಮನಸ್ಸು ಆರೋಗ್ಯವಾಗಿರಲು ಕ್ರೀಡೆ ಅತ್ಯುತ್ತಮ ಸಾಧನವಾಗಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಜೊತೆಗೆ ಸಂವಹನ ಕೌಶಲ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮತದಾನ ಜಾಗೃತಿಗಾಗಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಹೊಂಗಯ್ಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಜಾವೀದ ಎಂ.ಜಮಾದಾರ, ಎಸ್.ಎಸ್.ಕೆರೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳೆನ್ನವರ, ಗಂಗಾಧರ ಜೇವೂರ, ನಿಜು ಮೇಲಿನಕೇರಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.ಕೋಟ್

ಆಲೋಚನಾ ಮಟ್ಟ ಹೆಚ್ಚಿಸುವಲ್ಲಿ ಹಾಗೂ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ಸಮರ್ಪಣೆ ಹಾಗೂ ತಾಳ್ಮೆಯ ಮೌಲ್ಯ ಕಲಿಸಿಕೊಡುವಲ್ಲಿ ಆಟೋಟಗಳ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ನಿಯಮಿತವಾಗಿ ಯಾವುದಾದರೊಂದು ಚಟುವಟಿಕೆಗಳಲ್ಲಿ ಭಾಗವಹಿಸಬೇಕು.

ರಿಷಿ ಆನಂದ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ.