ಸಾರಾಂಶ
ಡಂಬಳ: ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಮನುಷ್ಯನಿಗೆ ತುಂಬಾ ಅವಶ್ಯಕವಿದ್ದು, ಯುವಕರು ದುಶ್ಚಚಟಗಳಿಗೆ ದಾಸರಾಗದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಹುಮ್ಮಸ್ಸು ಬೆಳೆಸಿಕೊಳ್ಳಬೇಕು ಎಂದು ಹಾವೇರಿ ಜಿಲ್ಲೆಯ ನರೇಗಲ್ ಗ್ರಾಮದ ತೊಂಟದಾರ್ಯ ವಿದ್ಯಾಪೀಠದ ಹಿರಿಯ ದೈಹಿಕ ಶಿಕ್ಷಕ ಎಸ್.ಎಸ್. ಕೆಂಭಾವಿ ಹೇಳಿದರು.
ಡಂಬಳ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಶನಿವಾರ ಡಂಬಳದ ಕನಕದಾಸ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಮಹಾಂತೇಶ ಹ. ಹೊರಕೇರಿ ಮತ್ತು ದಿ ಮಂಜುನಾಥ ಸೊ. ಹೊಂಬಳ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡಾಕೂಟದಲ್ಲಿ ಭಾಗವಹಿಸಿರುವವರು ಕ್ರೀಡಾಸ್ಫೂರ್ತಿ ಮೆರೆಯಬೇಕು. ಆಸ್ತಿ ಹಣ ಎಲ್ಲ ರೀತಿಯ ಅನುಕೂಲವಿದ್ದವರು ಸಾಧನೆ ಮಾಡುವುದು ದೊಡ್ಡದಲ್ಲ. ಅನಾನೂಕೂಲತೆಯ ಮದ್ಯ ಸಾಧನೆ ಮಾಡುವುದು ಇತರರಿಗೆ ಸ್ಫೂರ್ತಿ ಎಂದರು.
ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ೩%ರಷ್ಟು ಮೀಸಲಾತಿ ನೀಡಿದೆ. ಸರ್ಕಾರ ಕ್ರೀಡಾಪಟುಗಳಿಗೆ ಹಲವಾರು ಯೋಜನೆ ಜಾರಿಗೆ ತಂದಿವೆ. ಅವುಗಳನ್ನು ಪ್ರತಿಯೊಬ್ಬ ಕ್ರೀಡಾಪಟು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದರು.ನಿವೃತ್ತ ಶಿಕ್ಷಕ ಅಶೋಕ ಮಾನೆ ಮತ್ತು ಶಿಕ್ಷಕ ಎಂ.ಎಂ. ಬಂಡಿ ಮಾತನಾಡಿ, ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಕ್ರೀಡಾಕೂಟ ಯಶಸ್ವಿ ಮಾಡಬೇಕು. ಇಂತಹ ಸಾಮಾಜಿಕ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.
ಪ್ರಥಮ ಬಹುಮಾನ ₹11111 ವಿಜಯನಗರ, ₹7777 ದ್ವಿತೀಯ ಬಹುಮಾನ ಎಸ್.ಜೆ. ಮುಂಡರಗಿ, ₹5555 ತೃತೀಯ ಬಹುಮಾನ ಹಂಚಿನಾಳ ಗ್ರಾಮದವರು ಪಡೆದುಕೊಂಡರು.ಈ ಸಂದರ್ಭದಲ್ಲಿ ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ಮಲ್ಲೇಶ ಮಠದ, ಗ್ರಾಪಂ ಸದಸ್ಯರಾದ ಶಂಕ್ರಪ್ಪ ಗಡಗಿ, ಕುಮಾರ ಮಾನೆ, ಬಸವರಾಜ ಬಂಡಿ, ಮಾರುತಿ ಕೊಳ್ಳಾರ. ಯಲ್ಲಪ್ಪ ಕರಿಗಾರ, ಶಿವಾನಂದ ಬಂಡಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗಂಗಾವತಿ, ಈರಣ್ಣ ಪಾರಪ್ಪನವರ, ದೈಹಿಕ ಶಿಕ್ಷಕ ಸಿದ್ದು ಪೂಜಾರ, ವೀರೇಶ ಬಡಿಗೇರ, ಪ್ರಕಾಶ ಪೂಜಾರ, ಬಸಯ್ಯ ಕೊಡಿಕೊಪ್ಪ ಸೇರಿದಂತೆ ಕಮಿಟಿಯ ಎಲ್ಲ ಯುವಕರು ಪದಾಧಿಕಾರಿಗಳು ಕ್ರೀಡಾಪ್ರೇಮಿಗಳು ಇದ್ದರು.
ಶಿಕ್ಷಕ ಯಲ್ಲಪ್ಪ ತಳವಾರ ನಿರೂಪಿಸಿದರು. ಶಿಕ್ಷಕ ರಮೇಶ ಹೊಂಬಳ ವಂದಿಸಿದರು.