ಗ್ರಾಮಸ್ಥರ ಒತ್ತಡ ನಿವಾರಣೆಗೆ ಕ್ರೀಡಾಕೂಟ: ಮಧುಸೂದನ್

| Published : Feb 19 2024, 01:32 AM IST

ಸಾರಾಂಶ

ಬಿ.ಕಣಬೂರು ಗ್ರಾಮ ಪಂಚಾಯಿತಿ ಇಟ್ಟಿಗೆ ಸೀಗೋಡು ವಾರ್ಡ್ 9ರ ಸದಸ್ಯ ಬಿ.ಕೆ.ಮಧುಸೂದನ್ ತಮ್ಮ ವಾರ್ಡ್ ಗ್ರಾಮಸ್ಥರಿಗಾಗಿ ನಮ್ಮ ವಾರ್ಡ್ ನಮ್ಮ ಹಬ್ಬ ಎಂಬ ವಿಶೇಷ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಿದ್ದರು.

ಇಟ್ಟಿಗೆ ಸೀಗೋಡಲ್ಲಿ ನಮ್ಮ ವಾರ್ಡ್ ನಮ್ಮ ಹಬ್ಬ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಿ.ಕಣಬೂರು ಗ್ರಾಮ ಪಂಚಾಯಿತಿ ಇಟ್ಟಿಗೆ ಸೀಗೋಡು ವಾರ್ಡ್ 9ರ ಸದಸ್ಯ ಬಿ.ಕೆ.ಮಧುಸೂದನ್ ತಮ್ಮ ವಾರ್ಡ್ ಗ್ರಾಮಸ್ಥರಿಗಾಗಿ ನಮ್ಮ ವಾರ್ಡ್ ನಮ್ಮ ಹಬ್ಬ ಎಂಬ ವಿಶೇಷ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಿದ್ದರು.

ನಮ್ಮ ವಾರ್ಡ್ ನಮ್ಮ ಹಬ್ಬದಲ್ಲಿ ಗ್ರಾಮಸ್ಥರಿಗಾಗಿ ವಿಶೇಷ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಬಾಲ್ಯದ ಸವಿನೆನಪುಗಳನ್ನು ನೆನಪಿಸುವ ಕಾರ್ಯ ಮಾಡಿದರು. ವಾರ್ಡ್ 9ರ ಗ್ರಾಮಸ್ಥರಿಗೆ ಗೋಣಿ ಚೀಲದ ಓಟ, ಮಡಿಕೆ ಒಡೆಯುವುದು, ಚಮಚದ ಓಟ, ಅರೌಂಡ್ ದ ವಿಕೆಟ್, ಬಲಾ ಬಲ ಪ್ರದರ್ಶನ, ಹಗ್ಗ ಜಗ್ಗಾಟ, ವಾಟರ್ ಪಾಸ್, ಬಲೂನ್ ಆಟ ಸೇರಿದಂತೆ ವಿವಿಧ ಆಟಗಳನ್ನು ಆಡಿಸಿ ಬಹುಮಾನ ವಿತರಿಸಿದರು. ಮಧ್ಯಾಹ್ನ ವಿಶೇಷವಾದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಬಡಿಸುವ ಮೂಲಕ ಗ್ರಾಮಸ್ಥರ ಮನ ಸಂತೃಪ್ತಿಗೊಳಿಸಿದರು.

ಕಾರ್ಯಕ್ರಮ ಕುರಿತು ಸಂಘಟಕ ಬಿ.ಕೆ.ಮಧುಸೂದನ್ ಮಾತನಾಡಿ, ವಾರ್ಡ್ 9ರ ಗ್ರಾಮಸ್ಥರಿಗಾಗಿ ಸ್ವಂತ ಖರ್ಚಿನಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದ್ದು, ಸದಾ ಒತ್ತಡದ ಕಾರ್ಯಗಳಲ್ಲಿ ಇರುವ ಗ್ರಾಮಸ್ಥರಿಗೆ ಕ್ರೀಡಾಕೂಟಗಳ ಮೂಲಕ ಒತ್ತಡ ನಿವಾರಣೆ ಮಾಡಲು ಕಿರು ಕಾರ್ಯಕ್ರಮ ಮಾಡಲಾಗಿದೆ.

ಗ್ರಾಮೀಣ ಕ್ರೀಡಾಕೂಟಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವುಗಳಿಗೆ ಒತ್ತು ನೀಡಲಾಗಿದೆ. ಗ್ರಾಮಸ್ಥರು ಸಹ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಪತ್ನಿ ಪುಷ್ಪಾ ರಾಜೇಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಮಾಜಿ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಎಂ.ಎಸ್.ಅರುಣೇಶ್, ಬಿ.ಸಿ.ಸಂತೋಷ್‌ಕುಮಾರ್, ಫಿಲೋಮಿನಾ, ಪ್ರತಿಮಾ ಪ್ರಶಾಂತ್, ಕಾಫಿ ಬೆಳೆಗಾರ ಕೆ.ಸಿ.ಕೇಶವಗೌಡ, ಸ್ಥಳೀಯರಾದ ಲೋಕಯ್ಯ ಪೂಜಾರಿ, ಬೋಜಣ್ಣ, ಲೂಯಿಸ್, ಪುಷ್ಪ, ರತ್ನಮ್ಮ, ಗಿರೀಶ್ ಹುಯಿಗೆರೆ, ಹಿರಿಯಣ್ಣ, ಜಾನ್ ಡಿಸೋಜಾ, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಸುರೇಂದ್ರ ಮಾಸ್ತರ್, ಮನುಕುಮಾರ್ ಮತ್ತಿತರರು ಹಾಜರಿದ್ದರು.

ಕ್ರೀಡಾಕೂಟದಲ್ಲಿ ಆದರ್ಶನಗರ, ಇಟ್ಟಿಗೆ ಸೀಗೋಡು, ಶಿವನಗರ, ಇಟ್ಟಿಗೆ, ದೊಡ್ಡಹಡ್ಲು, ಕುತ್ರಡ್ಲಿನ ಗ್ರಾಮಸ್ಥರು ಭಾಗವಹಿಸಿದ್ದರು.೧೮ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡಿನಲ್ಲಿ ಗ್ರಾಪಂ ಸದಸ್ಯ ಬಿ.ಕೆ.ಮಧುಸೂದನ್ ಆಯೋಜಿಸಿದ್ದ ನಮ್ಮ ವಾರ್ಡ್ ನಮ್ಮ ಹಬ್ಬ ಕಾರ್ಯಕ್ರಮದ ಗೋಣಿ ಚೀಲದ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯರು.