ಮಕ್ಕಳ ಪ್ರತಿಭೆ ಹೊರ ತೆಗೆಯಲು ಕ್ರೀಡಾಕೂಟಗಳು ಸಹಕಾರಿ: ಎಚ್.ತ್ಯಾಗರಾಜು

| Published : Aug 30 2025, 01:00 AM IST

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ನಡುವೆ ಪರಸ್ಪರ ಸೋದರತ್ವ ಸಂಬಂಧಗಳು ವೃದ್ಧಿಸುತ್ತವೆ.

ಪಾಂಡವಪುರ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಪ್ರತಿಭೆ ಹೊರತೆಗೆಯಲು ಶಾಲಾ ಹಂತದ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ಹೇಳಿದರು. ತಾಲೂಕಿನ ಜಕ್ಕನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಸರ್ಕಾರಿ ಪ್ರಾಥಮಿಕ ಶಾಲೆಗಳ ವೃತ್ತಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಯಿದೆ. ಅಂತಹ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಶಾಲಾ ಹಂತದ ಕ್ರೀಡಾಕೂಟಗಳು ಮಾಡುತ್ತಿವೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ನಡುವೆ ಪರಸ್ಪರ ಸೋದರತ್ವ ಸಂಬಂಧಗಳು ವೃದ್ಧಿಸುತ್ತವೆ. ಕ್ರೀಡೆಗಳಲ್ಲಿ ಸೋಲು- ಗೆಲುವು ಸಾಮಾನ್ಯ. ಎರಡನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಜೇಂದ್ರಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಕ್ರೀಡೆ ಜತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲಿದ್ದಾರೆ ಎಂದರು. ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ದೊಡ್ಡಘಟ್ಟ ಸುರೇಶ್, ತಾಪಂ ಮಾಜಿ ಸದಸ್ಯ ರಾಮೇಗೌಡ ಸೇರಿ ಶಾಲಾ ಆಡಳಿತ ಮಂಡಳಿ, ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.